ADVERTISEMENT

ಬರ ಸಮಸ್ಯೆ ಚರ್ಚೆಗೆ ಬರದ ಶಾಸಕರು

100 ತಾಲ್ಲೂಕುಗಳ ಸಮಸ್ಯೆ; 80 ಸದಸ್ಯರು ಮಾತ್ರ ಹಾಜರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:00 IST
Last Updated 12 ಡಿಸೆಂಬರ್ 2018, 20:00 IST
   

ಬೆಳಗಾವಿ: ರಾಜ್ಯದ 100 ತಾಲ್ಲೂಕುಗಳ ಬರ ಸಮಸ್ಯೆ ಕುರಿತ ಚರ್ಚೆಗೆ ವಿಧಾನಸಭೆಯಲ್ಲಿ ಶಾಸಕರು ಬುಧವಾರ ನಿರುತ್ಸಾಹ ತೋರಿದರು.

ಮಧ್ಯಾಹ್ನದ ಬಳಿಕ ಸದನದಲ್ಲಿ ಹಾಜರಿದ್ದವರು 80 ಸದಸ್ಯರು ಮಾತ್ರ. ಅವರಲ್ಲಿ ಬಿಜೆಪಿ ಸದಸ್ಯರ ಸಂಖ್ಯೆಯೇ ಜಾಸ್ತಿ ಇತ್ತು. ಈ ಗಂಭೀರ ಚರ್ಚೆಯ ವೇಳೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರೇ ಹಾಜರಿಲ್ಲ ಎಂದು ಬಿಜೆಪಿಯ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದನದಲ್ಲಿ ಹಾಜರಿರುವ ಸಚಿವರು ಸಹ ಪಟ್ಟಾಂಗದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಜೆ ಐದು ಗಂಟೆ ಆಗುತ್ತಿದ್ದಂತೆ ಸದಸ್ಯರ ಸಂಖ್ಯೆ 50ಕ್ಕೆ ಇಳಿಯಿತು. ಈ ನಡುವೆ, ಬಿಜೆಪಿ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ ಅವರು ಕೊಡಗು ಅತಿವೃಷ್ಟಿಯ ಕುರಿತು ಪ್ರಸ್ತಾಪಿಸಿದರು. ಬರ ಗಂಭೀರತೆ ಬಗ್ಗೆ ಪ್ರಸ್ತಾಪಿಸಬೇಕಿದೆ ಎಂದು ಹಲವು ಸದಸ್ಯರು ಹೇಳಿದರು. ಮಾತನಾಡಲು ಅವಕಾಶ ಕೊಡಿ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್‌ ಕುಮಾರ್‌ ಮನವಿ ಮಾಡಿದರು. ಕಲಾಪವನ್ನು ಗುರುವಾರ ಬೆಳಿಗ್ಗೆ 11ಕ್ಕೆ ಮುಂದೂಡಲಾಗಿದೆ ಎಂದು ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಪ್ರಕಟಿಸಿದರು.

ADVERTISEMENT


‘ವಾರಕ್ಕೂ 50 ಲಕ್ಷ ಸಾಲದು’

ಬರಪೀಡಿತ ತಾಲ್ಲೂಕುಗಳಿಗೆ ಸರ್ಕಾರ ನೀಡುತ್ತಿರುವ ₹50 ಲಕ್ಷ ವಾರಕ್ಕೂ ಸಾಲದು ಎಂದು ಶಾಸಕ ಸುಬ್ಬಾ ರೆಡ್ಡಿ ಹೇಳಿದರು. ‘ಬರ ಬಂದ ಕೂಡಲೇ ಮೇವಿನ ಕಿಟ್‌ ನೀಡಲಾಗುತ್ತಿದೆ. ಅದು ಬೆಳೆದು ಹುಲ್ಲು ಬರಲು ಮೂರು ತಿಂಗಳು ಬೇಕು. ಆಗ ಬರ ಹೋಗಿರುತ್ತದೆ’ ಎಂದರು.

ಬರ ಪರಿಸ್ಥಿತಿಗೆ ಸ್ಪಂದಿಸದ ಸರ್ಕಾರ ಇದ್ದೂ ಸತ್ತಂತೆ: ಕೆ.ಎಸ್‌.ಈಶ್ವರಪ್ಪ ಕಿಡಿ

ಬೆಳಗಾವಿ: ‘ಬರ ಪರಿಸ್ಥಿತಿಗೆ ಸ್ಪಂದಿಸದ ಸರ್ಕಾರ ಇದ್ದೂ ಸತ್ತಂತೆ’ ಎಂದು ಬಿಜೆಪಿಯ ಕೆ.ಎಸ್. ಈಶ್ವರಪ್ಪಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಯಾವಾಗಲಾದರೂ ಕೊಟ್ಟೇ ಕೊಡುತ್ತದೆ. ರಾಜ್ಯ ಸರ್ಕಾರ ಅದುವರೆಗೂ ಕಾಯುತ್ತಾ ಕುಳಿತುಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ಜಿಲ್ಲಾ ಕೇಂದ್ರಗಳಲ್ಲಿ ಸಭೆ, ವಿಡಿಯೊ ಸಂವಾದ ನಡೆಸಿದರೆ ಬರ ನಿವಾರಣೆ ಸಾಧ್ಯವಾಗುವುದಿಲ್ಲ. ಸಚಿವರಿಗೆ, ಅಧಿಕಾರಿಗಳಿಗೆ ಸರ್ಕಾರ ಬಂಗಲೆ, ಕಾರು ನೀಡಿದೆ. ಈವರೆಗೂ ಯಾರೂ ರೈತರ ಹೊಲಗಳಿಗೆ ಹೋಗಿಲ್ಲ. ಕೇವಲ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಮೇವಿನ ಕೊರತೆಯಿಂದ ಜಾನುವಾರುಗಳನ್ನು ಅಗ್ಗದ ಬೆಲೆಗೆ ರೈತರು ಮಾರಾಟ ಮಾಡುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ’ ಎಂದು ಪ್ರಶ್ನಿಸಿದರು.

‘ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕನಿಷ್ಠ ₹ 5 ಕೋಟಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಬರ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ’ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟನೆ ನೀಡಿದರು.

‘ಬರಪೀಡಿತ ಪ್ರದೇಶಗಳಿಗೆ ನೀರು ಪೂರೈಕೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ‘ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಉತ್ತರ ನೀಡಿದ ಸಚಿವರು, ‘ಕುಡಿಯುವ ನೀರಿನ ಕಾಮಗಾರಿಗಳಿಗೆ ಜಿಲ್ಲಾ ಚಾಯಿತಿಗಳಲ್ಲಿ ₹ 1,700 ಕೋಟಿ ಇದೆ. ಅದರಲ್ಲಿ ಶೇ 70ಷ್ಟು ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

ಕುಡಿಯುವ ನೀರಿನ ತುರ್ತು ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಅನುಮತಿಗಾಗಿ ಕಾಯುವ ಅಗತ್ಯ ಇಲ್ಲ. ತಹಶೀಲ್ದಾರ್ ನೇರವಾಗಿ ಅನುಮತಿ ನೀಡಬಹುದು. ಮೌಖಿಕ ಅನುಮತಿ ಪಡೆದು ಟ್ಯಾಂಕರ್ ಮೂಲಕ ನೀರು ಸರಬರಾಜು ಆರಂಭಿಸಬಹುದು. ಕೊರತೆ ಉಂಟಾದ ಎರಡು ದಿನದಲ್ಲಿ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹೊಸ ಕೊಳವೆ ಬಾವಿ ಕೊರೆಯುವ ಬದಲು ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಬೇಕು. ಬಾಡಿಗೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಲಾಗಿದೆ ಎಂದರು.

* ಸೊರಬ ತಾಲ್ಲೂಕಿನಲ್ಲಿ 1227 ಕೆರೆಗಳು ಇವೆ. ಬರಗಾಲದಿಂದ ಅವು ಬತ್ತಿ ಹೋಗಿವೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ದುರ್ಬಳಕೆ ಆಗುತ್ತಿವೆ

-ಕುಮಾರ ಬಂಗಾರಪ್ಪ, ಬಿಜೆಪಿ ಶಾಸಕ

* ಹಾಸ್ಟೆಲ್‌ಗಳಲ್ಲಿ ಅನಧಿಕೃತವಾಗಿ ವಾಸವಿದ್ದ ವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬಯೊಮೆಟ್ರಿಕ್‌ ವ್ಯವಸ್ಥೆಯ ಮೂಲಕವೇ ಆಹಾರದ ಬಿಲ್‌ ಪಾವತಿಸಲಾಗುತ್ತದೆ.

- ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

* ನಮ್ಮ ಸಕ್ಕರೆ ಸಚಿವರು ಕಬ್ಬಿನ ಹಾಗೆ ಎತ್ತರಕ್ಕೆ ಬೆಳೆದಿದ್ದಾರೆ. ಅವರಿಗೆ ಬೆಳೆಗಾರರ ಸಮಸ್ಯೆ ಅರ್ಥವಾಗುವುದಿಲ್ಲ. ಒಳ್ಳೆಯ ವ್ಯಕ್ತಿಗೆ ಸಕ್ಕರೆ ಖಾತೆ ಕೊಡಿ.

- ವಿ.ಸೋಮಣ್ಣ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.