
ಬೆಂಗಳೂರು:‘ರಾಜ್ಯದ ಯುವಜನತೆ ಮಾದಕ ದ್ರವ್ಯ ಚಟಕ್ಕೆ ದಾಸರಾಗಿ ಹಾಳಾಗುತ್ತಿದ್ದರೆ, ಇವರು ಡ್ರಗ್ಸ್ ಪೆಡ್ಲರ್ಸ್‌ಗಳ ಜತೆ ಸೇರಿ ಆಡಳಿತ ನಡೆಸುತ್ತಿದ್ದಾರೆ. ಪೊಲೀಸ್ ಹುದ್ದೆಗಳನ್ನು ಮಾರಾಟಕ್ಕಿಟ್ಟಿದ್ದಾರೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಮತ್ತು ನಿವೃತ್ತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ನಮ್ಮ ಯುವಕರಿಗೆ ಭವಿಷ್ಯವಿಲ್ಲ. ನಮ್ಮ ನಾಡಿಗೂ ಭವಿಷ್ಯವಿಲ್ಲ. ಸರ್ಕಾರದಲ್ಲಿರುವವರಿಗೆ ಯಾವುದನ್ನೂ ನಿರ್ವಹಣೆ ಮಾಡಲು ಆಗುತ್ತಿಲ್ಲ’ ಎಂದು ಕಿಡಿಕಾರಿದರು.
‘ನಿಮ್ಮ ಪಕ್ಷದಲ್ಲಿ ಯೋಗ್ಯತೆ ಇರುವವರು ಯಾರಾದರೂ ಇದ್ದರೆ ಅವರಿಗೆ ಅಧಿಕಾರ ಕೊಡಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಶಿಕ್ಷಣ ವ್ಯವಸ್ಥೆ, ಕ್ರೀಡಾ ವ್ಯವಸ್ಥೆ ಹಾಳಾಗಿ ಹೋಗಿದೆ. ಆದರೆ, ರಾಜ್ಯ ಹಾಳಾಗಿ ಹೋಗುವುದು ಬೇಡ. ಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ಕೊಟ್ಟು ಹೋಗಲಿ. ಪೊಲೀಸ್ ಅಧಿಕಾರಿಗಳು ರಾಜೀನಾಮೆ ಕೊಡಲಿ. ಇವರು ಜನತೆಯನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ’ ಎಂದರು.
ಭಾಸ್ಕರ್ ರಾವ್ ಮಾತನಾಡಿ, ‘ರಾಜ್ಯದಲ್ಲಿ ಮಾದಕ ದ್ರವ್ಯ ತಡೆಗೆ ಪ್ರಬಲ ನೀತಿಯೇ ಇಲ್ಲ. ಮಾದಕ ದ್ರವ್ಯ ದಂಧೆ ನಡೆಸುವವರ ಬಗ್ಗೆ ಮೃದು ಧೋರಣೆ ಇದ್ದಂತಿದೆ. ಹೀಗಾಗಿ ಮೈಸೂರಿನಲ್ಲಿ ಮಾದಕ ದ್ರವ್ಯ ಪತ್ತೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಿಲ್ಲ. ಶಾಲಾ– ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿಲ್ಲ’ ಎಂದು ದೂರಿದರು.
‘ಅನೇಕ ಠಾಣೆಗಳ ಪೊಲೀಸರು ಡ್ರಗ್ ಪೆಡ್ಲರ್‌ಗಳಿಂದ ಹಣ ಪಡೆದುಕೊಳ್ಳುತ್ತಾರೆ. ಪೊಲೀಸ್ ಠಾಣೆಗಳಿಗೆ ಇಂತಿಷ್ಟು ಅಂತ ಕೊಡಬೇಕು ಅಂತ ಫಿಕ್ಸ್ ಮಾಡಿದ್ದಾರೆ. ಇದನ್ನು ತಡೆಯುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಒಂದೊಂದು ಸ್ಟೇಷನ್, ಸಬ್ ಡಿವಿಜನ್‌ಗೂ ಇಷ್ಟು ಕೊಡಬೇಕು ಎಂದು ಫಿಕ್ಸ್ ಮಾಡಿದ್ದಾರೆ’ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.