ADVERTISEMENT

ಔಷಧ ಕೊರತೆ: ಜಿಲ್ಲೆಗಳಿಗೂ ತಟ್ಟಿದ ಬಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
   

ಮೈಸೂರು:  ಮೈಸೂರು ಭಾಗದ ಮಂಡ್ಯ ಮತ್ತು ಕೊಡಗುವಿನ ಜಿಲ್ಲಾ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆಯಾಗಿದೆ. ಈ ಕೊರತೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎ.ಬಿ.ಆರ್.ಕೆ) ಯೋಜನೆಯಡಿ ಸ್ಥಳೀಯವಾಗಿ ಔಷಧ ಖರೀದಿಸಿ ಸದ್ಯಕ್ಕೆ ಸರಿದೂಗಿಸಲಾಗುತ್ತಿದೆ.  

ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ತಲೆದೋರಿದರೆ ಸಮಸ್ಯೆ ಉಲ್ಬಣಿಸಲಿದೆ. ನೇರವಾಗಿ ಅದರ ಬಿಸಿ ರೋಗಿಗಳಿಗೂ ತಟ್ಟಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ: ‘ಸಾಲ ಮಾಡಿ ಖರೀದಿ’

ADVERTISEMENT

ಯಾದಗಿರಿ: ‘ಏಪ್ರಿಲ್ ತಿಂಗಳಿಂದ ಅಭಾವವಿದೆ. ತಾಲ್ಲೂಕು ಆಸ್ಪತ್ರೆಯವರು ₹10 ಲಕ್ಷದಿಂದ ₹15 ಲಕ್ಷದವರೆಗೆ, ಸಮುದಾಯ ಆರೋಗ್ಯ ಕೇಂದ್ರದವರು ₹3 ಲಕ್ಷದಿಂದ ₹4 ಲಕ್ಷದವರೆಗೆ ಸಾಲ ಮಾಡಿ ಔಷಧಗಳು ಖರೀದಿಸಿದ್ದಾರೆ. ಇದುವರೆಗೂ ‌ಅನುದಾನ ಬಂದಿಲ್ಲ..’ ಎಂದು ಹೆಸರು ಹೇಳಲಿಚ್ಛಿಸದ ಯಾದಗಿರಿ ಜಿಲ್ಲೆಯ ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರ ಅಳಲು ತೋಡಿಕೊಂಡರು 

‘300 ಬಗೆಯ ಔಷಧ ಪೂರೈಕೆ ಆಗಬೇಕಿತ್ತು. 30 ಔಷಧಗಳಷ್ಟೇ ಪೂರೈಕೆ ಆಗುತ್ತದೆ. ಕೇವಲ ಶೇ10ರಷ್ಟು ಔಷಧಗಳ ಮೇಲೆ ಆಸ್ಪತ್ರೆ ನಡೆಸಲು ಆಗುತ್ತಿಲ್ಲ. ಸಂಬಳವೇ ಒಂದೊಂದು ತಿಂಗಳು ತಡವಾಗಿ ಬರುತ್ತಿದೆ. ಸಾಲ ಮಾಡಿ ಹೇಗೆ ಖರೀದಿಸೋದು’ ಎಂದು ಪ್ರಶ್ನಿಸಿದರು. 

‘ಎಬಿಆರ್‌ಕೆಯಿಂದಲೂ ಸರಿಯಾಗಿ ಅನುದಾನ ಬರುತ್ತಿಲ್ಲ. ₹10 ಲಕ್ಷ ಅನುದಾನಕ್ಕೆ ಬೇಡಿಕೆ ಇರಿಸಿದರೆ ಒಂದೆರಡು ಲಕ್ಷ ರೂಪಾಯಿ ಮಾತ್ರ‌ ಕೊಡುತ್ತಿದ್ದಾರೆ’ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಐಫ್ಲ್ಯುಡ್ಸ್‌ಗಳು, ಆ್ಯಂಟಿ ಬಯಾಟಿಕ್ಸ್‌ ಚುಚ್ಚುಮದ್ದು, ಬೀದರ್‌ನಲ್ಲಿ ‘ಸೆಪ್‌ಟ್ರ್ಯಾಕ್ಜನ್‌’ ಆ್ಯಂಟಿಬಯೋಟಿಕ್‌ ಇಂಜೆಕ್ಷನ್‌ ಕೊರತೆ ಇದೆ. ’ರಾಯಚೂರಿನಲ್ಲಿ ಸ್ಥಳೀಯ ಅನುದಾನದಲ್ಲಿ ಔಷಧ ಖರೀದಿಗೆ ಕ್ರಮವಹಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೋಗಿಗಳಿಗೆ ಚೀಟಿ ಬರೆದು ಕೊಡ್ತಿದ್ದೇವೆ..  

ದಾವಣಗೆರೆ/ಚಿತ್ರದುರ್ಗ/ಶಿವಮೊಗ್ಗ: ಉಚಿತವಾಗಿ ನೀಡುತ್ತಿದ್ದ ಔಷಧಗಳ ಕೊರತೆಯು ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಎದುರಾಗಿದೆ. ಖಾಸಗಿ ಔಷಧದ ಅಂಗಡಿಯಲ್ಲಿ ಖರೀದಿಸುವಂತೆ ವೈದ್ಯರು, ಶುಶ್ರೂಷಕರು ಚೀಟಿ ನೀಡುತ್ತಿದ್ದಾರೆ.

ನೋವು ನಿವಾರಕಗಳು, ರೋಗ ನಿರೋಧಕ ಮಾತ್ರೆಗಳು, ಸಿರಪ್‌ಗಳ ಕೊರತೆ ತೀವ್ರವಾಗಿದೆ.  ‘ಮಂಡಿ ನೋವು, ಬೆನ್ನು ನೋವಿಗೆ ಹೆಚ್ಚಿನ ಜನರಿಗೆ ನೀಡುತ್ತಿದ್ದ ಔಷಧಗಳ ಪೂರೈಕೆ ಸ್ಥಗಿತಗೊಂಡಿದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ತಿಳಿಸಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಹುಚ್ಚು ನಾಯಿ ಕಡಿತ, ಹಾವು ಕಡಿತಕ್ಕೆ ಬಳಸುವ ಔಷಧಿಗಳೂ ಕೊರತೆ ಇವೆ’ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ, ಭದ್ರಾವತಿ) ತಾಲ್ಲೂಕು ಆಸ್ಪತ್ರೆಗಳಲ್ಲಿ 2025ರ ಏಪ್ರಿಲ್‌ನಿಂದಲೇ ಕೆಲವು ಮುಖ್ಯ ಔಷಧ ಪೂರೈಕೆ ಸ್ಥಗಿತಗೊಂಡಿದೆ‘ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಕರಾವಳಿಯಲ್ಲೂ ಖಾಸಗಿಯಾಗಿ ಖರೀದಿ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಗತ್ಯ  ಹಾಗೂ ತುರ್ತಾಗಿ ಬೇಕಾಗುವ ಔಷಧಗಳ ಕೊರತೆ ನೀಗಿಸಲು ಒಂದೊಂದಾಗಿ ಖರೀದಿಸಲಾಗಿದ್ದು, ಕೊರತೆ ತಕ್ಕ ಮಟ್ಟಿಗೆ ನೀಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.

‘ಕೊರತೆ ಇದ್ದ 170 ಔಷಧಗಳ ಖರೀದಿಗೆ ಆದೇಶವಾಗಿದೆ. 82 ಔಷಧಗಳ ಪೂರೈಕೆ ಆದೇಶ ಆಗಿದೆ. ಈ ಔಷಧಗಳು ಒಂದೊಂದಾಗಿ ಜಿಲ್ಲಾ ಔಷಧ ಉಗ್ರಾಣಕ್ಕೆ ತಲುಪಲಿವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಆದರೆ,ಒಳರೋಗಿಗಳು ಯಾವುದೇ ಔಷಧವನ್ನು ಹೊರಗಿನಿಂದ ಖರೀದಿಸುವ ಪ್ರಮೇಯ ಇಲ್ಲ. ವಿರಳ ಔಷಧಗಳನ್ನು ಮಾತ್ರ ಹೊರಗಿನಿಂದ ತರಿಸಿಕೊಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  

‘ಉಡುಪಿ ಜಿಲ್ಲೆಯಲ್ಲಿ ಯಾವುದೇ ಔಷಧಗಳ ಕೊರತೆ ಇಲ್ಲ. ಜಿಲ್ಲೆಯಲ್ಲಿ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಜನರು ಕಡಿಮೆ. ಈ ಕಾರಣಕ್ಕೆ ಹೆಚ್ಚಿನ ಔಷಧಗಳ ಕೊರತೆ ಆಗಿಲ್ಲ’ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.