ADVERTISEMENT

ಕಮಿಷನರ್‌ ಕಚೇರಿ ಬಳಿ ‘ಡ್ರಗ್ಸ್ ಪಾರ್ಟಿ’!

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ

ಸಂತೋಷ ಜಿಗಳಿಕೊಪ್ಪ
Published 26 ಆಗಸ್ಟ್ 2021, 21:45 IST
Last Updated 26 ಆಗಸ್ಟ್ 2021, 21:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೇಶದಾದ್ಯಂತ ಹೆಚ್ಚು ಸುದ್ದಿ ಮಾಡಿದ್ದ ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದ ಆರೋಪಿಗಳು, ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಸಮೀಪದಲ್ಲಿರುವ ‘1 ಕ್ಯೂ 1’ ಪಬ್‌ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.

ಸಿನಿಮಾ ನಟಿಯರು, ಉದ್ಯಮಿಗಳು, ಸರ್ಕಾರಿ ನೌಕರರು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದ ಡ್ರಗ್ಸ್ ಜಾಲ ಭೇದಿಸಿದ್ದ ಸಿಸಿಬಿ ಪೊಲೀಸರು, 25 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ್ದಾರೆ. ದಂಧೆಯಲ್ಲಿ ಆರೋಪಿಗಳ ಪಾತ್ರವನ್ನು ಸಾಕ್ಷ್ಯ ಸಮೇತ ದಾಖಲಿಸಲಾಗಿದ್ದು, ಚಾರ್ಜ್‌ಶೀಟ್‌ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

'ನಗರದ ಕಾಲೇಜ್‌ವೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಆರೋಪಿ ವೀರೇನ್ ಖನ್ನಾ, ವಿ.ಕೆ.ಪಿ ಪ್ರೊಡಕ್ಸನ್ ಹೆಸರಿನಲ್ಲಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಶ್ರೀಮಂತರ ಮಕ್ಕಳು ಹಾಗೂ ಉದ್ಯಮಿಗಳಿಗೆ ಪಾರ್ಟಿ ಆಯೋಜಿಸುತ್ತಿದ್ದ ಆತ, ಆರಂಭದಲ್ಲಿ ಗಾಂಜಾ ಮಾರುತ್ತಿದ್ದ. ನಂತರ ಕೊಕೇನ್, ಎಂಡಿಎಂಎ ಸೇರಿದಂತೆ ಇತರೆ ಡ್ರಗ್ಸ್‌ಗಳ ಮಾರಾಟಕ್ಕೆ ಕೈ ಹಾಕಿದ್ದ’ ಎಂಬ ಅಂಶವೂಪಟ್ಟಿಯಲ್ಲಿದೆ.

ADVERTISEMENT

‘ಪೊಲೀಸ್ ಕಮಿಷನರ್ ಕಚೇರಿ ಸಮೀಪದಲ್ಲಿರುವ ಕ್ವೀನ್ಸ್ ರಸ್ತೆಯಲ್ಲಿ ‘1 ಕ್ಯೂ 1’ ಪಬ್‌ ಇದೆ. ಇದಕ್ಕೆ ಹೊಂದಿಕೊಂಡೇ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಕಟ್ಟಡವಿದ್ದು, ಅದರಲ್ಲೇ ಪೊಲೀಸ್ ಜಂಟಿ ಕಮಿಷನರ್ ಕಚೇರಿ ಸಹ ಇದೆ. ಈ ಪಬ್‌ ಮಾಲೀಕರ ಜೊತೆ ಒಪ್ಪಂದ ಮಾಡಿಕೊಂಡಿದ್ದ ವೀರೇನ್, ಪ್ರತಿ ಶನಿವಾರ ‘ಪ್ಲೇಟ್ ಪ್ರಾಜೆಕ್ಟ್ ಹಾಸ್ಪಿಟಾಲಿಟಿ’ ಹೆಸರಿನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದ. ಪ್ರತಿ ಪಾರ್ಟಿಯಲ್ಲೂ 200ಕ್ಕೂ ಹೆಚ್ಚು ಮಂದಿ ಸೇರುತ್ತಿದ್ದರು.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.