ADVERTISEMENT

‘ಡ್ರಗ್ಸ್‌ ನಿಯಂತ್ರಣ: ಕಠಿಣ ಕ್ರಮ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 19:14 IST
Last Updated 15 ಸೆಪ್ಟೆಂಬರ್ 2020, 19:14 IST
ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ   

ಬೆಂಗಳೂರು: ‌‘ಡ್ರಗ್ಸ್ ಜಾಲ ಮಟ್ಟಹಾಕಬೇಕಾದರೆ ಅದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸ
ಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಡ್ರಗ್ಸ್ ಪಿಡುಗಿನಿಂದ ಯುವಕರ ಬದುಕು ಕಗ್ಗತ್ತಲಾಗಿದೆ. ಡ್ರಗ್ಸ್ ಮಾರಾಟ ತಡೆಯಲು ಪಕ್ಷಾತೀತವಾಗಿ ಕೈಜೋಡಿಸಬೇಕಿದೆ. ಈ ಜಾಲದ ನಿಗ್ರಹಕ್ಕೆ ವಿಶೇಷ ತನಿಖಾ ತಂಡ ರಚಿಸಬೇಕು. ವ್ಯಸನಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.

‘ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿದೆ. ರೇವ್ ಪಾರ್ಟಿಗಳು ಮುಂದುವರಿಯುತ್ತಿವೆ. ಡ್ರಗ್ಸ್ ದಂಧೆ ಮಾಡುವವರಿಗೆ ಜೀವಾವಧಿ ಶಿಕ್ಷೆ, ಮಾದಕ ವಸ್ತು ಪೂರೈಕೆದಾರರಿಗೆ 20 ವರ್ಷ ಶಿಕ್ಷೆ ಆಗಬೇಕು’ ಎಂದರು.

ADVERTISEMENT

‘ಇದೇ 21ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ವಿವಾದಾತ್ಮಕ ಕಾಯ್ದೆಗಳನ್ನು ಜಾರಿಗೆ ತರುವುದನ್ನು ಬಿಟ್ಟು, ಡ್ರಗ್ಸ್‌ ನಿಯಂತ್ರಣಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ಚರ್ಚೆ ನಡೆಸಬೇಕು’ ಎಂದೂ ಆಗ್ರಹಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖಂಡ್ರೆ, ‘ಶಾಸಕ ಜಮೀರ್ ಅಹಮದ್ ಡ್ರಗ್ಸ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆಸ್ತಿಯನ್ನೇ ಜಪ್ತಿ ಮಾಡಿ ಅಂದಿದ್ದಾರೆ. ಅವರು ಇನ್ನೇನು ಹೇಳಬೇಕು’ ಎಂದು ಪ್ರಶ್ನಿಸಿದರು.

‘ಸಚಿವ ಸಿ.ಟಿ. ರವಿಯವರಿಗೆ ಮಾನ ಮರ್ಯಾದೆ ಇದೆಯೇ. ರಾಜ್ಯದಲ್ಲಿ ಕ್ಯಾಸಿನೊ ಆರಂಭಿಸಲು ಹೊರಟವರು ಅದರ ಬಗ್ಗೆ ಮಾತನಾಡುತ್ತಾರೆಂದರೆ ಹೇಗೆ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.