ADVERTISEMENT

ದಂಡ ಕೊಟ್ಟವರಲ್ಲಿ ಕುಡುಕರೇ ಹೆಚ್ಚು!

ಹೊಸ ಮೋಟಾರು ವಾಹನ ಕಾಯ್ದೆ: ಎರಡು ತಿಂಗಳಲ್ಲಿ ₹80 ಲಕ್ಷ ದಂಡ ವಸೂಲಿ

ವೆಂಕಟೇಶ್ ಜಿ.ಎಚ್
Published 16 ನವೆಂಬರ್ 2019, 19:45 IST
Last Updated 16 ನವೆಂಬರ್ 2019, 19:45 IST
ವಾಹನ ಚಾಲಕರನ್ನು ತಪಾಸಣೆ ಮಾಡುತ್ತಿರುವ ಸಂಚಾರ ಪೊಲೀಸರು
ವಾಹನ ಚಾಲಕರನ್ನು ತಪಾಸಣೆ ಮಾಡುತ್ತಿರುವ ಸಂಚಾರ ಪೊಲೀಸರು    

ಬಾಗಲಕೋಟೆ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಎರಡು ತಿಂಗಳಲ್ಲಿಯೇ ಜಿಲ್ಲೆಯ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ 10,314 ‍ಪ್ರಕರಣಗಳನ್ನು ದಾಖಲಿಸಿ ₹80 ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ವಿಶೇಷವೆಂದರೆ ಅದರಲ್ಲಿ ಅರ್ಧದಷ್ಟಯ ದಂಡವನ್ನು, ಕುಡಿದು ವಾಹನ ಚಾಲನೆ ಮಾಡುವವರೇ ದಂಡ (₹46 ಲಕ್ಷ) ಪಾವತಿಸಿದ್ದಾರೆ.

2019ರ ಜನವರಿ 1ರಿಂದ ಅಕ್ಟೋಬರ್ 31ರವರೆಗೆ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಂದ ₹1.94 ಕೋಟಿ ದಂಡ ವಸೂಲಿಯಾಗಿದೆ.

ವಿಶೇಷ ಅಭಿಯಾನ: ’ಕುಡಿದು ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿದ್ದವು. ಅದನ್ನು ತಡೆಯಲು ಇಲಾಖೆಯಿಂದ ವಿಶೇಷ ಅಭಿಯಾನ ನಡೆಸಿದೆವು. ಅದರ ಫಲವಾಗಿ ಹೆಚ್ಚು ದಂಡ ವಸೂಲಿಯಾಗಿದೆ. ಇನ್ನೊಂದೆಡೆ ಇದರಿಂದ ಅಪಘಾತಗಳ ಪ್ರಮಾಣವೂ ಕಡಿಮೆ ಆಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಹೇಳುತ್ತಾರೆ.

ADVERTISEMENT

ಹೊಸ ಕಾಯ್ದೆಯಡಿ ಕುಡಿದು ವಾಹನ ಚಾಲನೆ ಮಾಡುವವರಿಗೆ ₹10 ಸಾವಿರ ದಂಡ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಸೀಟ್ ಬೆಲ್ಟ್ ಹಾಕದಿದ್ದಲ್ಲಿ ಇಲ್ಲವೇ ಬೈಕ್‌ಸವಾರರು ಹೆಲ್ಮೆಟ್ ಹಾಕದಿದ್ದಲ್ಲಿ, ಡಿ.ಎಲ್ ಇಲ್ಲದಿದ್ದರೆ ಹೆಚ್ಚುವರಿ ದಂಡ ಪಾವತಿಸಬೇಕಿದೆ.

ಕ್ಯಾಮೆರಾ ಕಣ್ಗಾವಲು: ವಾಹನ ಸವಾರರಿಂದ ದಂಡ ವಸೂಲಿ ಪ್ರಕ್ರಿಯೆ ವೇಳೆ ಸಾರ್ವಜನಿಕರು ಹಾಗೂ ಪೊಲೀಸರಲ್ಲಿ ಸದ್ವರ್ತನೆ ತರಲು ಬಾಡಿ ಕ್ಯಾಮೆರಾ ಪರಿಚಯಿಸಲಾಗಿದೆ. ಆರಂಭಿಕವಾಗಿ ಬಾಗಲಕೋಟೆ ನಗರದಲ್ಲಿ 14 ಮಂದಿ ಎಎಸ್‌ಐ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳಿಗೆ ಈ ಬಾಡಿ ಕ್ಯಾಮೆರಾ ನೀಡಲಾಗಿದೆ. ಕರ್ತವ್ಯ ನಿರ್ವಹಣೆ ವೇಳೆ ಅವುಗಳನ್ನು ಕಡ್ಡಾಯವಾಗಿ ಧರಿಸಿ ಚಾಲನಾ ಸ್ಥಿತಿಯಲ್ಲಿ ಇಡಬೇಕಿದೆ. ಕ್ಯಾಮೆರಾದಲ್ಲಿ ದಾಖಲಾಗುವ ದೃಶ್ಯಾವಳಿ ನೇರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆಗೆ ಒಳ‍ಪಡಲಿದೆ.

’ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಸೂಲಿ ವೇಳೆ ಕೆಲವೊಮ್ಮೆ ವಾಹನ ಸವಾರರು ಹಾಗೂ ಪೊಲೀಸರ ನಡುವೆ ವಾಗ್ವಾದ, ಜಗಳ, ಹಲ್ಲೆಯಂತಹ ಘಟನೆಗಳು ನಡೆದಿದ್ದವು. ಬಾಡಿ ಕ್ಯಾಮೆರಾ ಇಬ್ಬರಲ್ಲೂ ಸದ್ವರ್ತನೆ ಮೂಡಿಸಲಿದೆ. ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಲಿದೆ’ ಎಂದು ಎಸ್ಪಿ ಹೇಳುತ್ತಾರೆ.

ಸರಕು ಸಾಗಣೆ (ಗೂಡ್ಸ್) ವಾಹನದಲ್ಲಿ ಪ್ರಯಾಣಿಕರ ಸಾಗಣೆ ಹಾಗೂ ನಿಗದಿತ ಮಿತಿಗಿಂತ ಹೆಚ್ಚಿನ ಜನರ ಸಾಗಣೆ ಮಾಡಿದ್ದಕ್ಕೆ 2236 ಪ್ರಕರಣಗಳ ದಾಖಲಿಸಿ ₹4.5 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.