ADVERTISEMENT

ಕುಡಿದ ಅಪ್ಪನಿಗೆ ಮಗುವಿನೊಂದಿಗೆ ರಸ್ತೆಯಲ್ಲೇ ನಿದ್ದೆ!

ಮದ್ಯದ ನಶೆಯಲ್ಲಿದ್ದವನ ಕಂದನ ಮುಖ ನೋಡಿ ಮಾನವೀಯತೆ ತೋರಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಮೇ 2020, 10:53 IST
Last Updated 6 ಮೇ 2020, 10:53 IST
   

ಕುಮಟಾ: ಮದ್ಯದ ಅಮಲಿನಲ್ಲಿ ಕೂಲಿ ಕಾರ್ಮಿಕನೊಬ್ಬತಾಲ್ಲೂಕಿನ ಕತಗಾಲದಲ್ಲಿ ಮಧ್ಯರಾತ್ರಿ ತನ್ನ ಎರಡೂವರೆ ವರ್ಷದ ಹೆಣ್ಣು ಮಗುವನ್ನು ರಸ್ತೆ ಬದಿ ಮಣ್ಣಿನಲ್ಲಿ ಮಲಗಿಸಿದ್ದ. ಆಕೆಯ ಪಕ್ಕದಲ್ಲೇ ತಾನೂ ಪ್ರಪಂಚ ಮರೆತು ನಿದ್ದೆ ಹೋಗಿದ್ದ. ಇಬ್ಬರನ್ನೂ ರಕ್ಷಿಸಿದ ಪೊಲೀಸರು, ಊಟ ತಿಂಡಿ, ಹಾಲು ನೀಡಿ ಮಾನವೀಯತೆ ತೋರಿದ್ದಾರೆ.

ಯಾದಗಿರಿಯನಾರಾಯಣಪುರದ ಗದಿಗೆಪ್ಪ (29) ಈ ರೀತಿ ಮಾಡಿದ್ದು, ಸೋಮವಾರ ಮಧ್ಯರಾತ್ರಿ ಕುಮಟಾದಿಂದ ತನ್ನ ಮಗುವಿನೊಂದಿಗೆ ಊರಿಗೆ ಬೈಕ್‌ನಲ್ಲಿ ಹೊರಟಿದ್ದ. ಲಾಕ್‌ಡೌನ್ ಅವಧಿಯಲ್ಲಿಪೊಲೀಸರ ಕಣ್ಣು ತಪ್ಪಿಸಿ ಹೋಗಲು ಯತ್ನಿಸಿದ್ದ. ಆದರೆ, ಅಳಕೋಡ ಗ್ರಾಮ ಪಂಚಾಯ್ತಿಯ ಕತಗಾಲ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ತಡೆದು ವಿಚಾರಿಸಿದರು.ಆಗ ಆತ ಕುಡಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಿ ಪೊಲೀಸರು ಅವನಿಗೆ ಊಟ, ಮಗುವಿಗೆ ಹಾಲು ಬಿಸ್ಕತ್, ಕೊಟ್ಟು ಅಲ್ಲಿಯೇ ಮಲಗಲು ತಿಳಿಸಿದ್ದರು. ಆದರೆ, ಅಲ್ಲಿಂದ ಹೊರಟು ಸುಮಾರು 15 ಕಿಲೋಮೀಟರ್ ದೂರದ ದೇವಿಮನೆ ಘಟ್ಟದವರೆಗೆ ಸಾಗಿದ್ದ. ಬಳಿಕ ದಟ್ಟವಾದ ಕಾಡಿನ ರಸ್ತೆಯಂಚಿಗೆ ಮಗುವನ್ನು ಮಲಗಿಸಿ ತಾನೂನಿದ್ದೆಗೆ ಜಾರಿದ್ದ. ಈ ಬಗ್ಗೆ ಮಾಹಿತಿ ತಿಳಿದ ಕತಗಾಲ ಪೊಲೀಸ್ ಸಿಬ್ಬಂದಿ ತಕ್ಷಣ ಅಲ್ಲಿಗೆ ತೆರಳಿ ಆತನನ್ನು ಕರೆತಂದರು.

ADVERTISEMENT

‘ಸೋಮವಾರ ಬೆಳಗಿನ ಜಾವ ಮೂರು ಗಂಟೆಗೆ ಯಾವುದೋ ವಾಹನದವರು ದೇವಿಮನೆ ಘಟ್ಟದ ರಸ್ತೆಯಂಚಿಗೆ ಇಬ್ಬರು ಮಲಗಿದ್ದಾರೆ ಎಂಬ ಮಾಹಿತಿ ನೀಡಿದರು. ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ನಾವು ಆಹಾರ ನೀಡಿದ ಗದಿಗೆಪ್ಪ ಎಂದು ತಿಳಿಯಿತು. ಅವನ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು’ ಎಂದುಹೆಸರು ಹೇಳಲು ಇಚ್ಛಿಸದ ಪೊಲೀಸ್ ಸಿಬ್ಬಂದಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಾಡುಪ್ರಾಣಿಗಳು, ಹಾವುಗಳು ಸಂಚರಿಸುವ ಪ್ರದೇಶವಾಗಿದ್ದು, ಅಪಾಯವಾಗುವ ಸಾಧ್ಯತೆಯಿತ್ತು.ಆತನನ್ನು ಎಚ್ಚರಗೊಳಿಸಿ ಕತಗಾಲಕ್ಕೆಕರೆದುಕೊಂಡು ಬಂದು ಮಲಗಲು ಜಾಗ ಕೊಟ್ಟೆವು. ಮರುದಿನ ಬೆಳಿಗ್ಗೆ ತಿಂಡಿ, ಮಗುವಿಗೆ ಹಾಲು ತರಿಸಿಕೊಟ್ಟೆವು. ಆ ಮಗುವಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದಊರಿಗೆ ಕಳಿಸಿಕೊಟ್ಟೆವು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.