ADVERTISEMENT

ಬೇಡವಾದಾಗ ಬಂದು ಕಂಗಾಲು ಮಾಡಿದ ಮಳೆ

ಜಯಪುರ ಜಿಲ್ಲೆಯಲ್ಲಿ ಮಳೆ: ದ್ರಾಕ್ಷಿ ಬೆಳೆಗಾರರು, ಒಣ ದ್ರಾಕ್ಷಿ ತಯಾರಕರಿಗೆ ಸಂಕಷ್ಟ

ಡಿ.ಬಿ, ನಾಗರಾಜ
Published 5 ಏಪ್ರಿಲ್ 2019, 19:00 IST
Last Updated 5 ಏಪ್ರಿಲ್ 2019, 19:00 IST
ಗುರುವಾರ ರಾತ್ರಿ ಸುರಿದ ಮಳೆಗೆ ಹಾನಿಗೀಡಾದ ದ್ರಾಕ್ಷಿಯನ್ನು ಹೆಕ್ಕುತ್ತಿರುವ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಅಣ್ಣಾರಾಯ ಗದ್ಯಾಳ ಕುಟುಂಬದವರು
ಗುರುವಾರ ರಾತ್ರಿ ಸುರಿದ ಮಳೆಗೆ ಹಾನಿಗೀಡಾದ ದ್ರಾಕ್ಷಿಯನ್ನು ಹೆಕ್ಕುತ್ತಿರುವ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಅಣ್ಣಾರಾಯ ಗದ್ಯಾಳ ಕುಟುಂಬದವರು   

ವಿಜಯಪುರ: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಸುರಿದ ಮಳೆಯಿಂದ ತಿಕೋಟಾ, ಬಬಲೇಶ್ವರ, ವಿಜಯಪುರ ತಾಲ್ಲೂಕಿನ ದ್ರಾಕ್ಷಿ ಬೆಳೆಗಾರರು, ಒಣ ದ್ರಾಕ್ಷಿ ತಯಾರಕರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ, ಕನಮಡಿ, ಬಾಬಾನಗರ, ತಿಕೋಟಾ, ಜಾಲಗೇರಿ, ಟಕ್ಕಳಕಿ, ಘೊಣಸಗಿ ಸೇರಿದಂತೆ ವಿವಿಧೆಡೆ ಸುರಿದ ವರ್ಷಧಾರೆ ದ್ರಾಕ್ಷಿ ಬೆಳೆಗಾರರನ್ನು ಬೀದಿಗೆ ತಳ್ಳಿದೆ.

ಭೀಕರ ಬರದಲ್ಲೂ ನಾಲ್ಕು ಎಕರೆಯಲ್ಲಿನ ದ್ರಾಕ್ಷಿ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ, ನೀರಿಗಾಗಿಯೇ ₹18 ಲಕ್ಷ ಖರ್ಚು ಮಾಡಿದ್ದು ವ್ಯರ್ಥವಾಯಿತು ಎಂದು ಅಲವತ್ತುಕೊಂಡ ತಿಕೋಟಾ ತಾಲ್ಲೂಕಿನ ಕಳ್ಳವಟಗಿಯ ಅಣ್ಣಾರಾಯ ಗದ್ಯಾಳ, ‘ಔಷಧಿ, ಗೊಬ್ಬರ, ಕೂಲಿಯಾಳು, ಚಾಟ್ನಿ ಸೇರಿದಂತೆ ಒಟ್ಟು ₹ 25 ಲಕ್ಷ ಖರ್ಚಾಗಿತ್ತು. ಇನ್ನೇನ್‌ ಬೆಳಿ ಕೈಗೆ ಸಿಗೋದ್ರಾಗನ, ಮಳಿ ಬಂದು ಎಲ್ಲಾ ಹಾಳ್‌ ಮಾಡಿಬಿಡ್ತು’ ಎಂದು ಗದ್ಗದಿತರಾದರು.

ADVERTISEMENT

‘ನಂಗ ಲಾಭ ಮುಖ್ಯ ಆಗಿದ್ದಿಲ್ಲ; ಮೊದ್ಲ ದ್ರಾಕ್ಷಿ ಪಡ ಉಳಸ್ಕೋಬೇಕಾಗಿತ್ತು. ಹಿಂಗಾಗೇ ಬೀಗರು, ದೋಸ್ತರ ಕಡೆ ಕೈಗಡ ತಂದಿದ್ದೆ. ದ್ರಾಕ್ಷಿ ಕಟಾವು ಮಾಡಿ ನಾಲ್ಕೈದು ದಿನದ ಹಿಂದ ಮಣೂಕ (ಒಣ ದ್ರಾಕ್ಷಿ) ಮಾಡಾಕಂತ ಶೆಡ್‌ಗೆ ಹಾಕಿದ್ದೆ. ಇನ್ನ ಸ್ವಲ್ಪ ದಿನ ಹೋಗಿದ್ರ ಗೆದ್ದ ಬಿಡತಿದ್ದೆ. ಇವತ್ತಿನ ರೇಟಿಗೆ ಮಾರಿದ್ರೂ ₹ 20 ಲಕ್ಷದಿಂದ ₹22 ಲಕ್ಷ ಸಿಕ್ಕ.. ಸಿಗ್ತಿತ್ತು. ಆದ್ರ, ಗುರುವಾರ ರಾತ್ರಿ ಸುರದ ಮಳಿಯಿಂದ, ಈಗ ₹ 2 ಲಕ್ಷ ಸಿಕ್ಕರೂ ಹೆಚ್ಚು’ ಎಂದು ನಿಟ್ಟುಸಿರುಬಿಟ್ಟರು.

‘ಗಂಧಕದ ಟ್ರೀಟ್‌ಮೆಂಟ್‌ ಮಾಡಲಿ’
‘ಮಳೆಗೆ ಸಿಲುಕಿದ ಒಣದ್ರಾಕ್ಷಿ ಕಂದು ಬಣ್ಣಕ್ಕೆ ತಿರುಗಲಿದೆ. ಮತ್ತೆ ಮೂಲ ಬಣ್ಣಕ್ಕೆ ಬರಬೇಕು ಎಂದರೆ ಗಂಧಕದ ಟ್ರೀಟ್‌ಮೆಂಟ್‌ ಮಾಡಬೇಕಿದೆ’ ಎನ್ನುತ್ತಾರೆ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ.

‘ಗಿಡದಲ್ಲೇ ಮಳೆಗೆ ಸಿಲುಕಿದ ದ್ರಾಕ್ಷಿ ಗೊನೆ ಕೊಯ್ಲು ಸದ್ಯಕ್ಕೆ ಬೇಡ. ಬಿಸಿಲು ಬಿದ್ದರೆ ಮತ್ತೆ ಸಿಹಿ ಹೆಚ್ಚಲಿದೆ. ನಂತರ ಕಟಾವು ಮಾಡಬಹುದು’ ಎಂದು ಅವರು ಸಲಹೆ ನೀಡಿದರು.

‘ಮಾರ್ಚ್‌ 31ರ ರಾತ್ರಿ ತಿಕೋಟಾ ತಾಲ್ಲೂಕಿನ ಕನಮಡಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ 20 ಹೆಕ್ಟೇರ್‌ಗೂ ಹೆಚ್ಚು ದ್ರಾಕ್ಷಿ ಪಡಕ್ಕೆ ಹಾನಿಯಾಗಿದೆ’ ಎಂದು ಅವರು ಹೇಳಿದರು.

**

‘ಜೈ ಜವಾನ್‌, ಜೈ ಕಿಸಾನ್’’ ಘೋಷಣೆ ನಮಗೆ ಅನ್ವಯ ಆಗೋದಿಲ್ಲ ಬಿಡ್ರಿ. ‘ಜವಾನ್‌’ನ ಕಾಳಜಿ ನಡದೈತಿ. ಆದ್ರ ‘ಕಿಸಾನ್‌’ನ ಕಷ್ಟ ಕೇಳೋರ.. ಇಲ್ಲ
-ಪಿಂಟು ರಾಠೋಡ, ಕಳ್ಳಕವಟಗಿ

**

ಏಳೂವರಿ ಟನ್ ಮಣೂಕ ಮಳೆ ನೀರಿಗೆ ನೆಂದು, ಕರ್ರಗ ಆಗಾಕತ್ತೈತಿ. ಇದಕ್ಕ ಚಲೋ ಧಾರಣಿ ಸಿಗಲ್ಲ. ಸರ್ಕಾರ ನಮ್ಮ ನೆರವಿಗೆ ಬರಬೇಕು
-ಅಶೋಕ ಸಿದ್ಧರಾಮ ಕೆಲೂರ, ಆಲಮೇಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.