ADVERTISEMENT

ಮೋದಿ ಹೊಗಳಿದ ದುಬೈ ಕನ್ನಡ ಶಾಲೆಯ ಮಕ್ಕಳು ಸಾಹಿತ್ಯವನ್ನೂ ಬರೆಯ ಬಲ್ಲರು!

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 10:50 IST
Last Updated 29 ಡಿಸೆಂಬರ್ 2025, 10:50 IST
<div class="paragraphs"><p>ಎಚ್‌.ಪಿ. ನೀಲೇಶ್</p></div>

ಎಚ್‌.ಪಿ. ನೀಲೇಶ್

   

ಬೆಂಗಳೂರು: ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸುಂದರವಾದ ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸಲು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಮಾಸಿಕ ರೇಡಿಯೊ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದರು.

ಈ ಕುರಿತು ದುಬೈನಲ್ಲಿ ನೆಲೆಸಿರುವ ಕನ್ನಡಿಗ ಹಾಗೂ ಸ್ಪರ್ಶ ಗ್ರೂಪ್‌ನ ಸಂಸ್ಥಾಪಕರಾದ ಎಚ್‌.ಪಿ. ನೀಲೇಶ್ ಅವರು ಪ್ರಜಾವಾಣಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

ದುಬೈನಲ್ಲಿ ಕನ್ನಡ ಶಾಲೆ ತೆರೆಯುವ ಆಲೋಚನೆ ಬಂದಿದ್ದು ಹೇಗೆ?

ಮೊದಲಿಗೆ ಈ ಆಲೋಚನೆ ಬಂದಿದ್ದು ನನ್ನ ಸಹೋದರರು ಹಾಗೂ ಸಹ ಸಂಸ್ಥಾಪಕರಾದ ಶಶಿಧರ್ ನಾಗರಾಜಪ್ಪನವರಿಗೆ. ಅವರು 25 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿರುವ ಬೇರೆ ಬೇರೆ ದೇಶಗಳ ಮಕ್ಕಳು ತಮ್ಮ ಮಾತೃಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡವನ್ನು ನಮ್ಮ ಮಕ್ಕಳು ಮರೆಯುತ್ತಿದ್ದಾರೆ. ಇದನ್ನು ಉಳಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಸುತ್ತೂರು ಶ್ರೀಗಳ ಬೆಂಬಲ

ನಾವು ಹೀಗೊಂದು ಕನ್ನಡ ಶಾಲೆಯನ್ನು ಮಾಡಬೇಕು ಎಂದು ಯೋಚಿಸಿದಾಗ, ಸುತ್ತೂರು ಶ್ರೀಗಳು ದುಬೈನಲ್ಲಿರುವ ತಮ್ಮ ಶಾಲೆಯಲ್ಲಿ ಸ್ಥಳಾವಕಾಶ ಮಾಡಿಕೊಟ್ಟರು. ಜೊತೆಗೆ ಸಾವಿರಾರು ಜನರು ನಮಗೆ ಸಹಕಾರ ನೀಡಿದ್ದಾರೆ. ವಿಶೇಷವಾಗಿ, ದುಬೈ ಕನ್ನಡ ಶಾಲಾ ಸಮಿತಿಯ ಉಪಾಧ್ಯಕ್ಷರು ಹಾಗೂ ಫಾರ್ಚೂನ್ ಗ್ರೂಪ್‌ನ ಮಾಲೀಕ ಪ್ರವೀಣ್ ಕುಮಾರ್ ಅವರು ನಮಗೆ ಸಹಕಾರ ನೀಡಿದರು ಎಂದರು.

ಎಷ್ಟು ಜನ ಮಕ್ಕಳು ಕಲಿಯುತ್ತಿದ್ದಾರೆ?

ಆರಂಭದಲ್ಲಿ ಕೇವಲ ನಾಲ್ವರು ಮಕ್ಕಳಿಂದ ಆರಂಭವಾದ ಈ ಶಾಲೆಯಲ್ಲಿ ಸದ್ಯ 1200ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ. 30ಕ್ಕಿಂತ ಅಧಿಕ ಶಿಕ್ಷಕರು ಸ್ವಯಂಪ್ರೇರಿತವಾಗಿ ಕನ್ನಡ ಕಲಿಸುತ್ತಿದ್ದಾರೆ ಎಂದರು.

ಭೋಧನಾ ವಿಧಾನ ಹೇಗಿದೆ?

ಮಕ್ಕಳನ್ನು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಎಂದು ವಿಭಾಗಿಸಿ ಕನ್ನಡ ಕಲಿಸಲಾಗುತ್ತಿದೆ. ಸದ್ಯ, ನಮ್ಮಲ್ಲಿರುವ ಮಕ್ಕಳು ಸಾಹಿತ್ಯ ಹಾಗೂ ಹಾಡು ಬರೆಯುವಷ್ಟು ಕನ್ನಡವನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಪಠ್ಯಕ್ರಮ ಪಾಲಿಸುತ್ತೀರಿ?

ನಾವು ಕರ್ನಾಟಕದಲ್ಲಿನ ಪಠ್ಯಕ್ರಮವನ್ನು ಭೋಧಿಸುವುದಿಲ್ಲ. ಬದಲಾಗಿ, ಇಲ್ಲಿವವರೆ ಸೇರಿಕೊಂಡು ಹೊಸ ಪಠ್ಯವನ್ನು ಸಿದ್ಧಪಡಿಸಿದ್ದೇವೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ಬೇರೆ ಬೇರೆ ಪಠ್ಯ ಸಿದ್ಧಪಡಿಸಿದ್ದೇವೆ.

ಕನ್ನಡ ಶಾಲೆ ತೆರೆಯಲು ಅನುಮತಿ ಸಿಕ್ಕಿದ್ದು ಹೇಗೆ?

ನಾವು ಆರಂಭದಲ್ಲಿ ಇಲ್ಲಿನ ಸ್ಥಳೀಯ ಮುನ್ಸಿಪಲ್ ಜೊತೆ ಮಾತುಕತೆ ನಡೆಸಿದೆವು. ಇದಕ್ಕೆ ಪ್ರತ್ಯೇಕ ಅನುಮತಿಯ ಅಗತ್ಯವಿಲ್ಲ. ನಾವು ಕೋವಿಡ್‌ಗೆ ಮೊದಲು ಭೌತಿಕ ತರಗತಿ ನಡೆಸುತ್ತಿದ್ದೆವು. ಆದರೆ, ಕೋವಿಡ್ ಬಳಿಕ ಆನ್‌ಲೈನ್ ತರಗತಿ ನಡೆಸುತ್ತಿದ್ದೇವೆ.

ವಾರದಲ್ಲಿ ಎಷ್ಟು ದಿನ ಕನ್ನಡ ಪಾಠ ಮಾಡಲಾಗುತ್ತದೆ.

ಇಲ್ಲಿರುವ ಪ್ರತಿಯೊಬ್ಬ ಕನ್ನಡದ ವಿದ್ಯಾರ್ಥಿ ಕೂಡ ಬೇರೆ ಬೇರೆ ಐಚ್ಛಿಕ ವಿಷಯಗಳನ್ನು ಕಲಿಯುತ್ತಾರೆ. ಆದರೆ, ನಮ್ಮ ಮಕ್ಕಳು ಕನ್ನಡ ಮರೆಯಬಾರದು ಎಂಬ ಕಾರಣಕ್ಕೆ ವಾರಾಂತ್ಯದ ದಿನಗಳಾದ ಶನಿವಾರ ಹಾಗೂ ಭಾನುವಾರ ವಿಶೇಷ ತರಗತಿಗಳನ್ನು ನಡೆಸುತ್ತೇವೆ ಎಂದರು.

ನಮ್ಮ ಸಂಸ್ಥೆಯ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿದೆ. ಮುಂದಿನ ದಿನಗಳಲ್ಲಿ ದುಬೈನಲ್ಲಿ ವಿದ್ಯಾಭ್ಯಾಸ ಕಲಿತು ಸ್ವದೇಶಕ್ಕೆ ಬಂದು ಸಿಇಟಿ ಪರೀಕ್ಷೆ ಬರೆಯುವವರಿಗೆ ನಮ್ಮ ಶಾಲೆಯಲ್ಲಿ ನೀಡುವ ಪ್ರಮಾಣಪತ್ರವನ್ನು ಪರಿಗಣಿಸಿ ಅವರಿಗೆ ರಿಯಾಯಿತಿ ನೀಡಬೇಕು ಎಂಬುದು ನಮ್ಮ ಆಗ್ರಹ.

ನಿಮ್ಮ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ನರೇಂದ್ರ ಮೋದಿಯವರ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಅವರು ನಮ್ಮ ಪುಟ್ಟ ಕೆಲಸವನ್ನು ಗುರುತಿಸುತ್ತಾರೆ ಅಂದರೆ ಅವರಿಗೆ ದೇಶದ ಮೇಲಿರುವ ಕಾಳಜಿ ಎಂತಹದ್ದು ಎಂಬುದು ತಿಳಿಯುತ್ತದೆ. ನಮ್ಮದು ಒಂದು ಪ್ರಾದೇಶಿಕ ಭಾಷೆ. ಈ ಭಾಷೆಯ ಬಗ್ಗೆ ಅವರಿಗಿರುವ ಅಭಿಮಾನ ಹಾಗೂ ಗೌರವ ಪದಗಳಲ್ಲಿ ವರ್ಣಿಸಲಾಗದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.