ADVERTISEMENT

ನಕಲಿ ಬೀಜ, ಕೀಟ ನಿಯಂತ್ರಕ ಔಷಧಿ ಮಾಫಿಯಾ ಹತ್ತಿಕ್ಕಲು ದೃಢ ನಿರ್ಧಾರ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 11:21 IST
Last Updated 25 ಏಪ್ರಿಲ್ 2020, 11:21 IST
   

ಬೆಂಗಳೂರು: ನಕಲಿ ಬೀಜ ಮತ್ತು ಕೀಟ ನಿಯಂತ್ರಕ ಔಷಧಿಗಳ ಮಾರಾಟಗಾರರ ಮಾಫಿಯಾ ಹತ್ತಿಕ್ಕಲು ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರಿಗೆ ಭರವಸೆ ನೀಡಿದ್ದಾರೆ.

ಮುಂಗಾರು ಬಿತ್ತನೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಅದರಲ್ಲೂ ಪ್ರಮಾಣೀಕೃತ ಬೀಜಗಳ ಮೇಲೆ ಅವಲಂಬಿತವಾಗಿರುವವರು ನಕಲಿ ಬೀಜಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಸೂಚನೆಯ ಮೇರೆಗೆ ಏ. 24 ರಂದು ಹಾವೇರಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಗೋದಾಮುಗಳ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ಮೆಕ್ಕೆಜೋಳ ಬೀಜದ ದಾಸ್ತಾನು ವಶಪಡಿಸಿಕೊಂಡಿದ್ದು, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನಕಲಿ ಬೀಜ ಮಾರಾಟಗಾರರ ಜಾಲ ಪತ್ತೆ ಹಚ್ಚಿದ್ದಾರೆ.

ADVERTISEMENT

ಹಾವೇರಿ ಜಿಲ್ಲೆಯ ಬ್ಯಾಡಗಿ ಶೀಥಲೀಕರಣ ಘಟಕಗಳಿಂದ ಸುಮಾರು 7026 ಕ್ವಿಂಟಲ್ ಮತ್ತು ಧಾರವಾಡ ಜಿಲ್ಲೆಯಲ್ಲಿ 270.60 ಕ್ವಿಂಟಲ್, ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ 70 ಕ್ವಿಂಟಲ್ ಸೇರಿ ಒಟ್ಟು 7366 ಕ್ವಿಂಟಲ್ ಬೀಜಗಳ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೊತ್ತ 10 ಕೋಟಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃಷಿ ಸಚಿವರ ಶ್ರಮ ಮತ್ತು ರೈತಪರ ಕಾಳಜಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ, ನಕಲಿ ಬೀಜ ದಾಸ್ತಾನುದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಸುಮಾರು 10ರಿಂದ11 ಜಿಲ್ಲೆಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿರುವ ರೈತರು ದೃಢೀಕರಿಸಿದ ಬೀಜಗಳ ಮೇಲೆ ಅವಲಂಬಿತರಾಗಿದ್ದಾರೆ. ರೈತರು ದೃಢೀಕರಣಗೊಂಡ ಮತ್ತು ಪ್ರಮಾಣೀಕೃತ ಬೀಜಗಳನ್ನು ಖರೀದಿಸಬೇಕು. ಬಿಡಿ ಬೀಜಗಳನ್ನು ಖರೀದಿಸಬಾರದು ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.