ADVERTISEMENT

ಸೈಬರ್ ಕೆಫೆಗಳ ಜೇಬು ತುಂಬಿಸುತ್ತಿರುವ ‘ಇ– ಲಾಸ್ಟ್’

ಕಳೆದುಹೋದ ವಸ್ತುಗಳ ದಾಖಲಾತಿಗೆ ಪೊಲೀಸರು ಸಿದ್ಧಪಡಿಸಿರುವ ಆ್ಯಪ್ * ಒಂದು ದೂರಿಗೆ ₹100ರಿಂದ ₹200 ವಸೂಲಿ

ಸಂತೋಷ ಜಿಗಳಿಕೊಪ್ಪ
Published 6 ಸೆಪ್ಟೆಂಬರ್ 2018, 19:43 IST
Last Updated 6 ಸೆಪ್ಟೆಂಬರ್ 2018, 19:43 IST
ಇ–ಲಾಸ್ಟ್‌ ರಿಫೋರ್ಟ್‌
ಇ–ಲಾಸ್ಟ್‌ ರಿಫೋರ್ಟ್‌   

ಬೆಂಗಳೂರು: ಕಳೆದು ಹೋದ ವಸ್ತು ಹಾಗೂ ದಾಖಲೆಗಳ ಬಗ್ಗೆ ದೂರು ಸ್ವೀಕರಿಸಲೆಂದು ರಾಜಧಾನಿಯ ಪೊಲೀಸರು ಸಿದ್ಧಪಡಿಸಿರುವ ‘ಇ–ಲಾಸ್ಟ್ ರಿಪೋರ್ಟ್’ ವ್ಯವಸ್ಥೆ, ನಗರದ ಹಲವು ಸೈಬರ್ ಕೆಫೆಗಳ ಜೇಬು ತುಂಬಿಸುತ್ತಿದೆ.

ಈ ಹಿಂದೆ ಯಾವುದೇ ವಸ್ತು ಹಾಗೂ ದಾಖಲೆಗಳು ಕಳೆದರೂ ಸಾರ್ವಜನಿಕರು ಠಾಣೆಗೆ ಹೋಗಿ ದೂರು ನೀಡಬೇಕಿತ್ತು. ಅದಕ್ಕಾಗಿ ಸಾಕಷ್ಟು ಅಲೆದಾಡಬೇಕಿತ್ತು. ಅದನ್ನು ತಪ್ಪಿಸಲೆಂದೇ ಉಚಿತವಾಗಿ ಸೇವೆ ನೀಡಲು ‘ಇ–ಲಾಸ್ಟ್’ ಜಾಲತಾಣ ಹಾಗೂ ಆ್ಯಪ್‌ ರೂಪಿಸಲಾಗಿದೆ.

ಜಾಲತಾಣ ಹಾಗೂ ಆ್ಯಪ್‌ನಲ್ಲಿ ದೂರು ದಾಖಲಿಸುವುದು ಹೇಗೆ ಎಂಬ ಮಾಹಿತಿ ಹಲವರಿಗೆ ಗೊತ್ತಿಲ್ಲ. ಅಂಥವರೇನಾದರೂ ದೂರು ನೀಡಲು ಠಾಣೆಗೆ ಹೋದರೆ, ‘ಸೈಬರ್‌ ಕೆಫೆಗಳಿಗೆ ಹೋಗಿ ದೂರು ನೀಡಿ’ ಎಂದು ಪೊಲೀಸರೇ ಹೇಳಿ ಕಳುಹಿಸುತ್ತಿದ್ದಾರೆ.

ADVERTISEMENT

ಅದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಕೆಫೆಗಳ ಮಾಲೀಕರು, ಒಂದು ದೂರು ಸಲ್ಲಿಸಲು ₹100ರಿಂದ ₹200ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ದೂರು ದಾಖಲಾದರೆ ಸಾಕು ಎನ್ನುವ ಸಾರ್ವಜನಿಕರು, ಕೇಳಿದಷ್ಟು ಹಣ ಕೊಟ್ಟು ಸ್ವೀಕೃತಿ ಪಡೆಯುತ್ತಿದ್ದಾರೆ.

ಕಾಟನ್‌ಪೇಟೆ, ಉಪ್ಪಾರಪೇಟೆ, ಕೆಂಗೇರಿ, ಜ್ಞಾನಭಾರತಿ, ವಿಜಯನಗರ, ಯಶವಂತಪುರ, ಪೀಣ್ಯ, ರಾಜಗೋಪಾಲನಗರ, ಚಾಮರಾಜಪೇಟೆ ಠಾಣೆ ಸಮೀಪದಲ್ಲೇ ಇಂಥ ಸೈಬರ್‌ ಕೆಫೆಗಳ ಹಾವಳಿ ಹೆಚ್ಚಾಗಿದೆ.

’ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಮೊನ್ನೆಯಷ್ಟೇ ಮನೆ ಖಾಲಿ ಮಾಡುವಾಗ, ದಾಖಲೆಗಳು ಕಳೆದುಹೋಗಿದ್ದವು. ಆ ಬಗ್ಗೆ ದೂರು ನೀಡಲು ಕಾಟನ್‌ಪೇಟೆ ಠಾಣೆಗೆ ಹೋಗಿದ್ದೆ. ಅಲ್ಲಿಯ ಸಿಬ್ಬಂದಿ, ಸೈಬರ್ ಕೆಫೆಗೆ ಕಳುಹಿಸಿದರು. ಏಕೆ ಎಂದು ಪ್ರಶ್ನಿಸಿದಾಗ, ‘ಅಲ್ಲೇ ಹೋಗಿ ದೂರು ಕೊಡಿ’ ಎಂದು ಹೇಳಿದರು. ಅನಿವಾರ್ಯವಾಗಿಯೇ ಕೆಫೆಗೆ ಹೋಗಿ ದೂರು ಕೊಟ್ಟೆ’ ಎಂದು ದೂರುದಾರರೊಬ್ಬರು ತಿಳಿಸಿದರು.

ಎಫ್‌ಐಆರ್ ಬದಲು ಸ್ವೀಕೃತಿ ಪತ್ರ: ಮೊಬೈಲ್, ಲ್ಯಾಪ್‌ಟಾಪ್, ಅಂಕಪಟ್ಟಿ, ಚಾಲನಾ ಪರವಾನಗಿ ಸೇರಿ ಹಲವು ವಸ್ತುಗಳು ಹಾಗೂ ದಾಖಲೆಗಳ ಕಳವು ಹಾಗೂ ನಾಪತ್ತೆ ಬಗ್ಗೆ ಈ ಹಿಂದೆ ನಗರದ ಠಾಣೆಗಳಿಗೆ ಹೆಚ್ಚಿನ ದೂರುಗಳು ಬರುತ್ತಿದ್ದವು. ಪ್ರತಿಯೊಬ್ಬರ ದೂರು ಆಧರಿಸಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಳ್ಳುವುದು ಪೊಲೀಸರಿಗೂ ತಲೆನೋವಾಗಿತ್ತು.

ಅದಕ್ಕೆ ಮುಕ್ತಿ ಹಾಡಲೆಂದೇ 2016ರಲ್ಲಿ ನಗರ ಪೊಲೀಸ್‌ ಕಮಿಷನರ್‌ ಆಗಿದ್ದ ಎನ್‌.ಎಸ್‌.ಮೇಘರಿಕ್, ‘ಪಿಸಿ ಸಲ್ಯೂಷನ್ಸ್‌’ ಸಹಯೋಗದಲ್ಲಿ ‘ಇ–ಲಾಸ್ಟ್‌ ರಿಪೋರ್ಟ್’ ವ್ಯವಸ್ಥೆ ರೂಪಿಸಿದ್ದರು. ಅಂದಿನಿಂದಲೇ ಜಾಲತಾಣ ಹಾಗೂ ಆ್ಯಪ್‌ ಮೂಲಕ ಈ ವ್ಯವಸ್ಥೆ ಜನರಿಗೆ ಲಭ್ಯವಾಗಿದೆ.

ಕೆಲವು ಪೊಲೀಸರೇ ಮಧ್ಯವರ್ತಿಗಳು: ವಸ್ತುಗಳು ಹಾಗೂ ದಾಖಲೆಗಳ ಕಳವು ಸಂಬಂಧ ದೂರು ನೀಡಲು ದಿನಕ್ಕೆ ಸುಮಾರು 30 ಮಂದಿ ನಗರದ ಠಾಣೆಗಳಿಗೆ ಭೇಟಿ ನೀಡುತ್ತಿದ್ದಾರೆ. ‘ಇ–ಲಾಸ್ಟ್‌ ರಿಪೋರ್ಟ್‌ ಮೂಲಕ ದೂರು ನೀಡಿ’ ಎಂದು ಹೇಳುತ್ತಿರುವ ಕೆಲವು ಪೊಲೀಸರು, ಅವರನ್ನೆಲ್ಲ ಸೈಬರ್‌ ಕೆಫೆಗಳಿಗೆ ಕಳುಹಿಸಿ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವಿದೆ.

‘ಯಶವಂತಪುರ ಠಾಣೆಗೆ ದೂರು ನೀಡಲು ಹೋದಾಗ, ಇ–ಲಾಸ್ಟ್ ಬಗ್ಗೆ ಹೇಳಿದರು. ಅದು ಏನು ಎಂಬುದು ನನಗೆ ಗೊತ್ತಾಗಲಿಲ್ಲ. ಠಾಣೆಯಲ್ಲಿದ್ದ ಕಾನ್‌ಸ್ಟೆಬಲೊಬ್ಬರು, ನನ್ನನ್ನು ಹತ್ತಿರದ ಸೈಬರ್ ಕೆಫೆಗೆ ಕಳುಹಿಸಿದರು. ಪೊಲೀಸರು ಕಳುಹಿಸಿದ್ದಾರೆ ಎಂದೊಡನೆ ಆತ, ಪುಸ್ತಕವೊಂದರಲ್ಲಿ ನನ್ನ ಹೆಸರು ಬರೆದುಕೊಂಡು ದೂರು ದಾಖಲಿಸಿಕೊಂಡ’ ಎಂದು ಆಟೊ ಚಾಲಕರೊಬ್ಬರು ಹೇಳಿದರು.

**

‘ಇ– ಲಾಸ್ಟ್ ರಿಪೋರ್ಟ್’ ಬಳಕೆ ಹೇಗೆ?

‘ಗೂಗಲ್‌ ಪ್ಲೇ ಸ್ಟೋರ್‌’ನಲ್ಲಿ ‘e-Lost Report’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ ತೆರೆದು ಬಳಕೆದಾರರ ಹೆಸರು, ವಿಳಾಸ, ಮೊಬೈಲ್‌ ನಂಬರ್‌ ನಮೂದಿಸಿ ‘ಲಾಗ್‌–ಇನ್‌’ ಆಗಬೇಕು. ಬಳಿಕ ಕಳೆದು ಹೋದ ದಾಖಲೆಗಳನ್ನು (ಆರ್ಟಿಕಲ್ಸ್‌) ನಮೂದಿಸಬೇಕು.

ಕಳೆದು ಹೋದ ವಸ್ತು ಹಾಗೂ ದಾಖಲೆಗಳ ಬಗ್ಗೆ ಆ್ಯಪ್‌ನಲ್ಲಿ ದೂರು ನೀಡಿದ ಕೆಲ ನಿಮಿಷಗಳಲ್ಲೇ ಅಧಿಕಾರಿಗಳ ಹಸ್ತಾಕ್ಷರವುಳ್ಳ ‘ಪಿಡಿಎಫ್‌’ ಮಾದರಿಯಲ್ಲಿ ಸ್ವೀಕೃತಿ ಪತ್ರ ಲಭ್ಯವಾಗುತ್ತದೆ.

ಆ್ಯಪ್‌ ಮೂಲಕ ದೊರೆಯುವ ಸ್ವೀಕೃತಿ ಪತ್ರ ಅಧಿಕೃತ. ಅದನ್ನು ಬಳಸಿ ಹೊಸ ದಾಖಲೆ ಮಾಡಿಸಿಕೊಳ್ಳಬಹುದು. ಮೊಬೈಲ್‌ ಕಳೆದಿದ್ದರೆ ಸ್ವೀಕೃತಿ ಪತ್ರ ಬಳಸಿ ಹೊಸ ಸಿಮ್‌ ಖರೀದಿಸಬಹುದು’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಕಳೆದುಹೋದ ವಸ್ತು ಹಾಗೂ ದಾಖಲೆಗಳು ಪೊಲೀಸರಿಗೆ ದೊರಕಿದರೆ, ಅಪ್‌ಲೋಡ್‌ ಮಾಡಲಾದ ಮಾಹಿತಿ ಆಧರಿಸಿ ಸಂಬಂಧಪಟ್ಟ ದೂರುದಾರರಿಗೆ ಮರಳಿಸಲಾಗುವುದು. ಈ ಬಗ್ಗೆ ಕಾಲಕಾಲಕ್ಕೆ ದೂರುದಾರರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುವುದು’ ಎಂದು ವಿವರಿಸಿದರು.

**

ಇವುಗಳು ಕಳೆದರೆ ದೂರು ನೀಡಬಹುದು

* ಮೂಲ ಅಂಕಪಟ್ಟಿಗಳು, ಶೈಕ್ಷಣಿಕ ದಾಖಲೆಗಳು

* ಮೊಬೈಲ್‌, ಲ್ಯಾಪ್‌ಟಾಪ್‌, ದುಬಾರಿ ಎಲೆಕ್ಟ್ರಾನಿಕ್‌ ವಸ್ತುಗಳು

* ಪಾಸ್‌ಪೊರ್ಟ್‌, ಚಾಲನಾ ಪರವಾನಗಿ ಪತ್ರ, ವಾಹನಗಳ ನೋಂದಣಿ ಪ್ರಮಾಣ ಪತ್ರ, ಪಾನ್‌ ಕಾರ್ಡ್‌ ಹಾಗೂ ಯಾವುದೇ ಉಪಯುಕ್ತ ದಾಖಲೆ 

**

ಸೈಬರ್ ಕೆಫೆಗೆ ಹೋಗಿ ಎನ್ನುವ ಸಿಬ್ಬಂದಿ ಬಗ್ಗೆ ಸಾರ್ವಜನಿಕರು ಧೈರ್ಯವಾಗಿ ಠಾಣಾಧಿಕಾರಿ, ಎಸಿಪಿಗೆ ತಿಳಿಸಿ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತೇವೆ
– ರವಿ ಡಿ. ಚನ್ನಣ್ಣನವರ, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.