ADVERTISEMENT

ಇ–ಸಂಗ್ರಹಣಾಕ್ಕೆ ಕಾಮಗಾರಿ ಮಾಹಿತಿ: ಸಮಯಾವಕಾಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 14:32 IST
Last Updated 1 ನವೆಂಬರ್ 2025, 14:32 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ‘ಇ–ಸಂಗ್ರಹಣಾ ಪೋರ್ಟಲ್‌ನಲ್ಲಿರುವ ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ ಎಂಬ ಆದೇಶ ಜಾರಿಗೆ ಸಮಯಾವಕಾಶ ನೀಡಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.

‘ರಾಜ್ಯ ಗುತ್ತಿಗೆದಾರರ ಸಂಘದೊಂದಿಗೆ ಚರ್ಚಿಸದೆ ಆರ್ಥಿಕ ಇಲಾಖೆ ಈ ಆದೇಶ ಜಾರಿ ಮಾಡಿದೆ. ಇದರಿಂದ ಗುತ್ತಿಗೆದಾರರಿಗೆ ಇನ್ನೂ ಸಂಕಷ್ಟ ಎದುರಾಗಲಿದೆ. ಎರಡು–ಮೂರು ವರ್ಷದ ಹಿಂದಿನ ಬಿಲ್‌ಗಳನ್ನು ಅಪ್‌ಲೋಡ್‌ ಮಾಡಲು ಕನಿಷ್ಠ ಆರು ತಿಂಗಳು ಬೇಕು. ಹೀಗಾಗಿ ಕೂಡಲೇ ಆದೇಶ ಜಾರಿಯಾಗಬಾರದು’ ಎಂದು ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ಆಗ್ರಹಿಸಿದರು.

ADVERTISEMENT

‘ಕಾಮಗಾರಿ ಮುಗಿದು ಒಂದೆರಡು ವರ್ಷಗಳಾದರೂ ಹಣ ಬಿಡುಗಡೆಯಾಗುವುದಿಲ್ಲ. ಬಿಲ್‌ಗಳನ್ನು ಅಪ್‌ಲೋಡ್‌ ಮಾಡುವ ಈ ಆದೇಶದಲ್ಲಿ, ಜಿಎಸ್‌ಟಿ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ, ಸೂಕ್ತ ವಿವರಗಳನ್ನು ನೀಡಿ, ಗುತ್ತಿಗೆದಾರರೊಂದಿಗೆ ಸಮಾಲೋಚಿಸಿ ಆದೇಶ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಆದೇಶ: ರಾಜ್ಯದಲ್ಲಿ ಟೆಂಡರ್‌ ಆಗಿರುವ 36,709 ಕಾಮಗಾರಿಗಳಲ್ಲಿ 505 ಕಾಮಗಾರಿಗಳು ಮಾತ್ರ ‘ಗುತ್ತಿಗೆ ನಿರ್ವಹಣಾ ಮಾಡ್ಯೂಲ್‌’ನಲ್ಲಿ ಅಪ್‌ಲೋಡ್‌ ಆಗಿವೆ ಎಂಬ ಮಾಹಿತಿ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸೆ.19ರಂದು ನಡೆದ ಕೆಡಿಪಿ ಸಭೆಯಲ್ಲಿ ಚರ್ಚೆಯಾಯಿತು. ಹೀಗಾಗಿ,  ಇ–ಸಂಗ್ರಹಣಾ ಪೋರ್ಟಲ್‌ನ ಹಳೆ ಮತ್ತು ಹೊಸ ಆವೃತ್ತಿಗಳಲ್ಲಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗಿರುವ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ವಿವರಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣಾ ಪೋರ್ಟಲ್‌ನಲ್ಲಿ ಕಳೆದ ಐದು ಹಣಕಾಸು ವರ್ಷಗಳ ಅವಧಿಯ ವಿವರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆರ್ಥಿಕ ಇಲಾಖೆ ಅ.30ರಂದು ಆದೇಶಿಸಿದೆ.

ಈ ಮಾಹಿತಿಗಳು ಅಪ್‌ಲೋಡ್‌ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಎಲ್ಲ ಸಂಗ್ರಹಣಾ ಪ್ರಾಧಿಕಾರ ಹಾಗೂ ಖಜಾನೆ ಅಧಿಕಾರಿಗಳಿಗೆ ನಿರ್ದೇಶಿಸಿ, ತುರ್ತು ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.