
ಬೆಂಗಳೂರು: ಗ್ರಾಮ ಪಂಚಾಯತ್‌ಗಳಲ್ಲಿ ಇ–ಸ್ವತ್ತು ಖಾತಾ ವಿತರಣೆಗೆ ತಂತ್ರಾಂಶದಲ್ಲಿ ಸಮಸ್ಯೆ ಇದ್ದು, 15–25 ದಿನಗಳಲ್ಲಿ ಸರಿಪಡಿಸಿ ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿ.1 ರಿಂದ ಇ–ಸ್ವತ್ತು ಖಾತಾ ವಿತರಣೆ ಆರಂಭಿಸಿದರೂ ತಂತ್ರಾಂಶದಲ್ಲಿ ಸಮಸ್ಯೆಯಿಂದ ಖಾತಾ ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ಪ್ರಿಯಾಂಕ್ ಹೇಳಿದರು.
ತಂತ್ರಾಂಶವನ್ನು ಇನ್ನಷ್ಟು ಸರಳೀಕರಣ ಮತ್ತು ಸಬಲೀಕರಣ ಮಾಡಲಾಗುವುದು. ಈವರೆಗೆ ಇ–ಸ್ವತ್ತು 2.0 ತಂತ್ರಾಂಶದ ಮೂಲಕ 44,508 ಅರ್ಜಿಗಳು ಸಲ್ಲಿಕೆಯಾಗಿವೆ. ಅನುಮೋದನೆಗೊಂಡಿರುವ ಅರ್ಜಿಗಳ ಸಂಖ್ಯೆ 7,978 ಎಂದರು.
ತಂತ್ರಾಂಶ ಸರಿಪಡಿಸುವಂತೆ ಎನ್‌ಐಸಿಗೆ ಪತ್ರ ಬರೆಯಲಾಗಿದೆ. ಅವರಿಗೆ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಇದನ್ನು ಸರಿಪಡಿಸಲು ಹೆಚ್ಚು ಮಾನವ ಸಂಪನ್ಮೂಲ ನೀಡುವುದಾಗಿ ಎನ್‌ಐಸಿ ತಿಳಿಸಿದೆ ಎಂದರು.
ವಿಷಯ ಪ್ರಸ್ತಾಪಿಸಿದ ಕಿರಣ್ ಕೊಡ್ಗಿ, ಗ್ರಾಮಾಂತರ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ 11 ಎ ಮತ್ತು 11 ಬಿ ಖಾತಾಗಳ ವಿತರಣೆ ಸಂಪೂರ್ಣ ನಿಂತು ಹೋಗಿದೆ. ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.