
ಬೆಂಗಳೂರು: ‘ನಮೂನೆ-11 ಬಿ ಖಾತೆಗಳನ್ನು ‘ಇ-ಸ್ವತ್ತು 2.0’ ತಂತ್ರಾಂಶದಲ್ಲಿ ಎರಡು ವಾರಗಳ ಅವಧಿಯಲ್ಲಿ ನಮೂನೆ-11ಎ ಖಾತೆಗಳಾಗಿ ಪರಿವರ್ತಿಸಿಕೊಳ್ಳಲು, ಹೊಸ ಬಡಾವಣೆ ಹಾಗೂ ಬಹುಮಹಡಿ (ಅಪಾರ್ಟ್‌ಮೆಂಟ್) ಕಟ್ಟಡಗಳಿಗೆ ಅರ್ಜಿ ಸಲ್ಲಿಸಲು ಮುಂದಿನ ಒಂದು ತಿಂಗಳು ಅವಕಾಶ ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕಸ್ನೇಹಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಆನ್‍ಲೈನ್ ಮೂಲಕ ಈವರೆಗೆ 21,429 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅನುಮೋದನೆಗಾಗಿ ವಿವಿಧ ಹಂತಗಳಲ್ಲಿ ಬಾಕಿಯಿದೆ’ ಎಂದು ಅವರು ಹೇಳಿದ್ದಾರೆ.
‘ಅರ್ಜಿ ಸಲ್ಲಿಸುವಾಗ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶವನ್ನು ಇನ್ನಷ್ಟು ಸರಳೀಕರಿಸಲಾಗುವುದು. ಯಾರೂ ಆತಂಕಪಡುವ ಅಗತ್ಯ ಇಲ್ಲ’ ಎಂದಿದ್ದಾರೆ.
‘ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅನುಮೋದನೆ ಮಾಡುವ ಪ್ರಕ್ರಿಯೆ ಜ. 1ರಿಂದ ಆರಂಭವಾಗಿದೆ. ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಆನ್-ಲೈನ್ ಪೋರ್ಟಲ್ ಮೂಲಕ ತೆರಿಗೆ ಮತ್ತು ದಾಖಲೆ ಮುದ್ರಣದ ಶುಲ್ಕ ಪಾವತಿಸಿ ಇ-ಖಾತಾ ಡೌನ್-ಲೋಡ್ ಮಾಡಿಕೊಳ್ಳಬಹುದು’ ಎಂದು ಸಚಿವರು ಹೇಳಿದ್ದಾರೆ.
‘ಇ-ಸ್ವತ್ತಿಗೆ ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಿಲ್ಲ. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆ, ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಕೂಡಾ ಅವಕಾಶ ಕಲ್ಪಿಸಲಾಗಿದೆ. ಸಮಸ್ಯೆಗಳು ಎದುರಾದರೆ ಜಿಲ್ಲಾ ಸಹಾಯವಾಣಿಗೆ ಕರೆ ಮಾಡಬಹುದು’ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.