ADVERTISEMENT

ಕಾರ್ಮಿಕ ಕಾನೂನು ಸಡಿಲವಾದರೆ ಆರ್ಥಿಕ ಕುಸಿತ: ಕಾರ್ಮಿಕ ಸಂಘಟನೆಗಳ ಆತಂಕ

​ಪ್ರಜಾವಾಣಿ ವಾರ್ತೆ
Published 22 ಮೇ 2020, 12:46 IST
Last Updated 22 ಮೇ 2020, 12:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಯಾವುದೇ ಕಾರಣಕ್ಕೂ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಬಾರದು. ಹೀಗೆ ಮಾಡುವುದರಿಂದ ಈಗಾಗಲೇ ಇರುವ ಕೈಗಾರಿಕೆಗಳಿಗೆ ಮತ್ತು ಕಾರ್ಮಿಕರಿಗೆ ತೊಂದರೆಯಾಗುತ್ತದೆ. ರಾಜ್ಯವೂ ಆರ್ಥಿಕ ಕುಸಿತಕ್ಕೆ ಒಳಗಾಗುತ್ತದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹೇಳಿದೆ.

ಸಮಿತಿಯ ನಿಯೋಗವು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿತು.

‘ಅಸಂಘಟಿತ ಕಾರ್ಮಿಕರಿಗೆ ಘೋಷಿಸಿರುವ ₹5 ಸಾವಿರ ನೆರವನ್ನು ಕೂಡಲೇ ನೀಡಬೇಕು. ವಿಳಂಬ ಮಾಡಬಾರದು’ ಎಂದೂ ನಿಯೋಗ ಮನವಿ ಮಾಡಿತು.

ADVERTISEMENT

‘ಕೆಲಸದ ಅವಧಿಯನ್ನು ಹೆಚ್ಚಿಸುವುದು, ಕಾರ್ಮಿಕರ ಗುತ್ತಿಗೆ ಪ್ರಮಾಣ ಜಾಸ್ತಿ ಮಾಡುವುದು ಸೇರಿದಂತೆ ಮಾಲೀಕರ ಒತ್ತಡಕ್ಕೆ ಮಣಿದು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿದೆ. ಇಂತಹ ಕ್ರಮಗಳನ್ನು ಕೈಬಿಡಬೇಕು’ ಎಂದು ನಿಯೋಗ ಮನವಿ ಮಾಡಿತು.

ವಿವಿಧ ಕಾರ್ಮಿಕ ಸಂಘಟನೆಗಳು ನಗರದ ಮೌರ್ಯ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಲು ನಿರ್ಧರಿಸಿದ್ದವು. ಪೊಲೀಸರು ಅನುಮತಿ ನೀಡದ ಕಾರಣ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರಾದ ಶಾಮಣ್ಣ ರೆಡ್ಡಿ, ವಿಜಯ್‌ ಭಾಸ್ಕರ್, ಎಸ್. ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಮೈಕಲ್‌ ಫರ್ನಾಂಡಿಸ್, ಕೆ.ವಿ. ಭಟ್, ಎನ್.ಪಿ. ಸ್ವಾಮಿ ನಿಯೋಗದಲ್ಲಿದ್ದರು.

ಪ್ರಮುಖ ಬೇಡಿಕೆಗಳು

* ಲಾಕ್‌ಡೌನ್‌ ಅವಧಿಯ ವೇತನವನ್ನು ಎಲ್ಲ ಕಾರ್ಮಿಕರಿಗೂ ಪಾವತಿಸಬೇಕು

* ಗುತ್ತಿಗೆ ಕಾರ್ಮಿಕರನ್ನು ಒಳಗೊಂಡು ಯಾರನ್ನೂ ಕೆಲಸದಿಂದ ವಜಾ ಮಾಡಬಾರದು

* ಕೆಲಸದ ಅವಧಿಯನ್ನು ಹೆಚ್ಚಿಸಬಾರದು

* ಕೈಗಾರಿಕಾ ವಿವಾದ ಕಾಯ್ದೆಯಡಿ ಮಾಲೀಕರಿಗೆ ವಿನಾಯಿತಿ ನೀಡಬಾರದು

* 100ಕ್ಕಿಂತಲೂ ಹೆಚ್ಚು ಜನ ಕೆಲಸ ಮಾಡುವ ಕೈಗಾರಿಕೆಗಳನ್ನು ಸರ್ಕಾರದ ಅನುಮತಿ ಇಲ್ಲದೆ ಮುಚ್ಚಲು ಅವಕಾಶ ನೀಡಬಾರದು

* ಎಲ್ಲ ಅಸಂಘಟಿತ ಕಾರ್ಮಿಕರಿಗೆ ನೇರ ಆರ್ಥಿಕ ನೆರವು ನೀಡಬೇಕು

* ಕೊರೊನಾ ಹೋರಾಟಗಾರರಿಗೆ ರಕ್ಷಣೆ–ಕೆಲಸದ ಭದ್ರತೆ ನೀಡಬೇಕು

* ಎಪಿಎಂಸಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಹಿಂಪಡೆಯಬೇಕು

* ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಕೈಬಿಡಬೇಕು

* ಸಾರ್ವಜನಿಕ ಕೈಗಾರಿಕೆಗಳ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.