ADVERTISEMENT

ಕಾವೇರಿ ಟೆಲಿಕಾಂನ ₹ 40.14 ಕೋಟಿ ಮೌಲ್ಯದ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 15:45 IST
Last Updated 3 ಆಗಸ್ಟ್ 2022, 15:45 IST

ಬೆಂಗಳೂರು: ಹಿಂದಿನ ದೇನಾ ಬ್ಯಾಂಕ್‌ನಿಂದ ₹ 45 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ಕಾವೇರಿ ಟೆಲಿಕಾಂ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕರು ಮತ್ತು ಪ್ರವರ್ತಕರಿಗೆ ಸೇರಿದ ₹ 40.14 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ದೇನಾ ಬ್ಯಾಂಕ್‌ಗೆ ₹ 45 ಕೋಟಿ ವಂಚಿಸಿದ್ದ ಆರೋಪದ ಮೇಲೆ 2017ರ ಜುಲೈ 27ರಂದು ಕಾವೇರಿ ಟೆಲಿಕಾಂ ನಿರ್ದೇಶಕರು ಮತ್ತು ಪ್ರವರ್ತಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸಿತ್ತು. ನಕಲಿ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದು, ಸೋದರ ಸಂಸ್ಥೆಗಳನ್ನು ಬಳಸಿಕೊಂಡು ₹ 27.14 ಕೋಟಿಯನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿತ್ತು.

ಸಿಬಿಐ ತನಿಖಾ ವರದಿಯನ್ನು ಆಧರಿಸಿ ಕಾವೇರಿ ಟೆಲಿಕಾಂ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಕಂಪನಿ ಹೆಸರಿನಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದು, ಆ ಹಣವನ್ನು ಬಳಸಿಕೊಂಡು ಸಂಸ್ಥೆಯ ನಿರ್ದೇಶಕರು ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಿರುವುದನ್ನು ತನಿಖಾ ಸಂಸ್ಥೆ ಪತ್ತೆಮಾಡಿದೆ. ಕಾವೇರಿ ಟೆಲಿಕಾಂ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ನ ನಿರ್ದೇಶಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿರುವ ₹ 40.14 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ಗಳು, ವಸತಿ ನಿವೇಶನಗಳು, ಕೃಷಿ ಜಮೀನು ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.