ADVERTISEMENT

ಆ್ಯಂಬಿಡೆಂಟ್‌: ₹ 10.2 ಕೋಟಿ ಆಸ್ತಿ ಜಪ್ತಿ

ಠೇವಣಿದಾರರಿಗೆ ₹ 600 ಕೋಟಿ ವಂಚನೆ ಮಾಡಿದ ಆರೋಪ: ಮುಂದುವರಿದ ಇ.ಡಿ ತನಿಖೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:31 IST
Last Updated 13 ಡಿಸೆಂಬರ್ 2019, 20:31 IST
   

ಬೆಂಗಳೂರು: ಠೇವಣಿದಾರರಿಗೆ ಅಧಿಕ ಲಾಭದ ಆಸೆ ತೋರಿಸಿ, ₹ 600 ಕೋಟಿ ಠೇವಣಿ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಒಳಗಾಗಿರುವ ಆ್ಯಂಬಿಡೆಂಟ್‌ ಕಂಪನಿ ಮತ್ತು ಅದರ ಪ್ರವರ್ತಕರಿಗೆ ಸೇರಿದ ₹10.2 ಕೋಟಿ ಮೊತ್ತದ ಸ್ಥಿರ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.

ಬೆಂಗಳೂರಿನ ಕೆಲವೆಡೆ ಜಮೀನು ಮತ್ತು ಫ್ಲ್ಯಾಟ್‌ಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳ ಅಂದಾಜು ಬೆಲೆ ₹ 8.8 ಕೋಟಿ. ಅಲ್ಲದೆ, ₹ 1.4 ಕೋಟಿ ಮೌಲ್ಯದ ಚರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣಾ ಕಾಯ್ದೆಯಡಿ (ಫೆಮ) ಕಂಪನಿ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಇ.ಡಿಯಿಂದ ಆಸ್ತಿ ಜಪ್ತಿ ಆಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು 90 ಸಾವಿರಕ್ಕೂ ಹೆಚ್ಚು ಠೇವಣಿದಾರರಿಂದ ₹ 4000 ಕೋಟಿ ಹಣ ಸಂಗ್ರಹಿಸಿ ವಂಚಿಸಿರುವ ಆರೋಪಕ್ಕೆ ಒಳಗಾಗಿರುವ ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಗೆ ಸೇರಿದ ₹ 400 ಕೋಟಿ ಮೊತ್ತದ ಆಸ್ತಿ ಜಪ್ತಿ ಮಾಡಿದೆ.

ADVERTISEMENT

ಆ್ಯಂಬಿಡೆಂಟ್‌ ಕಂಪನಿ ವಂಚನೆ ಆರೋಪ ಸಂಬಂಧ ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ತನಿಖೆಯನ್ನು ಕೇಂದ್ರ ಅ‍ಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿತ್ತು. ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಈಗ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಪೊಲೀಸರ ಎಫ್‌ಐಆರ್‌ ಆಧರಿಸಿ ಫೆಮ ಕಾಯ್ದೆಯಡಿ ಇ.ಡಿ ತನಿಖೆ ನಡೆಯುತ್ತಿದೆ.

ಆರೋಪಿ ಕಂಪನಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಹೆಸರಿನಲ್ಲಿ ಹೂಡಿಕೆ ಮಾಡಿಸಿದೆ. ಹಜ್‌ ಮತ್ತು ಉಮ್ರಾ ಯೋಜನೆಯಡಿ ಶೇ 15 ರಷ್ಟು ಲಾಭ ಕೊಡುವುದಾಗಿ ನಂಬಿಸಿ ಹಣ ಸಂಗ್ರಹಿಸಿ ವಂಚಿಸಿದೆ. ಕಂಪನಿಯನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಥವಾ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಯಲ್ಲಿ ನೋಂದಣಿ ಮಾಡದೆ ಠೇವಣಿ ಸಂಗ್ರಹಿಸುವುದು ಅಕ್ರಮ. ಆದರೆ, ಪಾಲುದಾರಿಕೆ ನೆಪದಲ್ಲಿ ಹಣ ಸಂಗ್ರಹಿಸಲಾಗಿದೆ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.