ADVERTISEMENT

ಒಂಬತ್ತರವರೆಗಿನ ಪಠ್ಯ ಕಡಿತ ಬೇಡ: ನಿರಂಜನಾರಾಧ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 16:27 IST
Last Updated 7 ಜನವರಿ 2021, 16:27 IST
ನಿರಂಜನಾರಾಧ್ಯ ವಿ.ಪಿ
ನಿರಂಜನಾರಾಧ್ಯ ವಿ.ಪಿ   

ಬೆಂಗಳೂರು: ‘ರಾಜ್ಯದಲ್ಲಿ ಒಂಬತ್ತನೇ ತರಗತಿವರೆಗಿನ ಪಠ್ಯಗಳಲ್ಲಿ ಯಾವುದೇ ಕಡಿತ ಮಾಡದೆ, ಅದನ್ನು ಸಂಪೂರ್ಣವಾಗಿ ಕಲಿಸಲು ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿರುವ ಸರ್ಕಾರದ ನಡೆ ಸೂಕ್ತವಾಗಿದೆ’ ಎಂದು ಶಿಕ್ಷಣ ತಜ್ಞ, ‘ಮಕ್ಕಳ ನಡೆ-ಶಾಲೆಯ ಕಡೆ’ ಅಭಿಯಾನದ ನಿರಂಜನಾರಾಧ್ಯ ವಿ.ಪಿ ಅಭಿಪ್ರಾಯಪಟ್ಟಿದ್ದಾರೆ.

‘ಸರ್ಕಾರದ ಈ ನಿರ್ಧಾರಕ್ಕೆ ‘ಮಕ್ಕಳ ನಡೆ - ಶಾಲೆಯ ಕಡೆ’ ಅಭಿಯಾನದ ಬೆಂಬಲವಿದೆ. ಮಕ್ಕಳು ಈಗಾಗಲೇ 9 ತಿಂಗಳು ಕಲಿಕೆಯಿಂದ ವಂಚಿತರಾಗಿ ಹಲವನ್ನು ಮರೆತಿರುವ ಸಾಧ್ಯತೆಗಳಿವೆ. ಹೀಗಿರುವಾಗ, ಪಠ್ಯಗಳನ್ನು ಕಡಿತ ಮಾಡಿ ಮುಂದಿನ ತರಗತಿಗಳಿಗೆ ದೂಡಿದರೆ ಅವರ ಭವಿಷ್ಯಕ್ಕೆ ಇನ್ನಷ್ಟು ಹಾನಿ ಆಗಲಿದೆ. ಜೊತೆಗೆ ಗ್ರಾಮೀಣ ಮತ್ತು ನಗರದಲ್ಲಿನ ಮಕ್ಕಳ ಕಲಿಕೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪ್ರತಿಯೊಂದು ಮಗು ಆಯಾ ತರಗತಿಯಲ್ಲಿ ನಿಗದಿತ ಕಲಿಕಾ ಮಟ್ಟ ಮುಟ್ಟುವುದು ನ್ಯಾಯಸಮ್ಮತ ಹಕ್ಕಿನ ಭಾಗ. ಈ ಉದ್ದೇಶದಿಂದ ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‌ಇಆರ್‌ಟಿ ಸೂಕ್ತ ಬದಲಾವಣೆ ಮಾಡಿದೆ. ಮಕ್ಕಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷವನ್ನು ವಿಸ್ತರಿಸಿ ಎಲ್ಲ ಪಾಠಗಳನ್ನು ಕಲಿಸುವುದೇ ಸರಿಯಾದ ನಿರ್ಧಾರ. ಎಲ್ಲ ಶಿಕ್ಷಕರೂ ಈ ಕಾರ್ಯಕ್ಕೆ ಸಹಕರಿಸುವ ವಿಶ್ವಾಸವಿದೆ’ ಎಂದೂ ಅವರು ಆಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.