ADVERTISEMENT

ಧಾರ್ಮಿಕ ಭಾವನೆ ಪ್ರತಿನಿಧಿಸುವ ವಸ್ತ್ರಕ್ಕೆ ಅವಕಾಶವಿಲ್ಲ: ಸಚಿವ ಬಿ.ಸಿ.ನಾಗೇಶ್‌ 

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿ: ಸಮವಸ್ತ್ರ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 6:08 IST
Last Updated 27 ಮಾರ್ಚ್ 2022, 6:08 IST
ಸಚಿವ ಬಿ.ಸಿ.ನಾಗೇಶ್‌
ಸಚಿವ ಬಿ.ಸಿ.ನಾಗೇಶ್‌   

ಬಾಗಲಕೋಟೆ: ‘ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಆರಂಭವಾಗಲಿದೆ. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ. ಆದರೆ ಯಾವುದೇ ಧಾರ್ಮಿಕ ಭಾವನೆ ಪ್ರತಿನಿಧಿಸುವ ವಸ್ತ್ರಧರಿಸಿ ಬರಲು ಅವಕಾಶವಿಲ್ಲ‘ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ 8.74 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. 3,444 ಕೇಂದ್ರಗಳಲ್ಲಿ 48 ಸಾವಿರ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಸಲು ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಪ್ರತಿ ಬಾರಿಯಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 144 ಸೆಕ್ಷನ್ ಜಾರಿ ಇರಲಿದೆ ಎಂದು ತಿಳಿಸಿದರು.

'ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಈಗಾಗಲೇ ಆಯಾ ಶಾಲೆಗಳ ಮುಖ್ಯಸ್ಥರು ಪಾಲಿಸುತ್ತಿದ್ದಾರೆ. ಶಾಲೆಯ ಕಾಂಪೌಂಡ್ ಒಳಗೆ ಹಿಜಾಬ್ ಧರಿಸಿಬರಬಹುದು. ಆದರೆ ಕೊಠಡಿಯೊಳಗೆ ಧರಿಸಲು ಅವಕಾಶವಿಲ್ಲ. ಯಾವುದೇ ಉದ್ದೇಶದಿಂದ ಪರೀಕ್ಷೆಗೆ ಗೈರು ಹಾಜರಾದವರಿಗೆ ಮರು ‍ಪರೀಕ್ಷೆ ಮಾಡುವುದಿಲ್ಲ. ಬದಲಿಗೆ ಪೂರಕ ಪರೀಕ್ಷೆ ಬರೆಯಬಹುದು‘ ಎಂದು ಹೇಳಿದರು.

ADVERTISEMENT

ಆತಂಕ ಪಡುವ ಅಗತ್ಯವಿಲ್ಲ:ಪಠ್ಯಕ್ರಮದ (ಸಿಲೆಬಸ್) ಒಳಗೆ ಪ್ರಶ್ನೆಗಳು ಇರಲಿವೆ. ಹೀಗಾಗಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆತಂಕ ಬೇಡ. ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳ ಆಯ್ಕೆಗೆ (ಚಾಯ್ಸ್) ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ‍ಪರ್ಯಾಯ ಪ್ರಶ್ನೆಗಳನ್ನು ತೆಗೆದುಕೊಳ್ಳಬಹುದು ಎಂದರು.

ಪರೀಕ್ಷಾ ಕೇಂದ್ರದಲ್ಲಿ ಪುನರಾವರ್ತಿತ ಹಾಗೂ ಬಾಹ್ಯ ವಿದ್ಯಾರ್ಥಿಗಳಿಗೆ ಸಮವಸ್ತ್ರದಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.