ADVERTISEMENT

ಶಿಕ್ಷಕರ ವರ್ಗಾವಣೆ ಶುರು: ಕಡ್ಡಾಯ, ಹೆಚ್ಚುವರಿ ವರ್ಗಾವಣೆ ಆದವರಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 17:45 IST
Last Updated 30 ಜೂನ್ 2021, 17:45 IST
ಎಸ್‌.ಸುರೇಶ್‌ ಕುಮಾರ್
ಎಸ್‌.ಸುರೇಶ್‌ ಕುಮಾರ್   

ಬೆಂಗಳೂರು: ನನೆಗುದಿಗೆ ಬಿದ್ದಿದ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅಂತೂ ಬುಧವಾರ ಚಾಲನೆ ಸಿಕ್ಕಿದ್ದು, ಇದೇ 12ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದೆ.

2019-20ರಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ಆದವರಿಗೆ ಆದ್ಯತೆ ನೀಡಲಾಗುತ್ತದೆ. ನಂತರದಲ್ಲಿ 2020–21 ಹಾಗೂ 2021–22ನೇ ಸಾಲಿನ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯೂ ಇದೇ ಆಸುಪಾಸು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದ್ದಾರೆ.

‘ತಾಲ್ಲೂಕಿನ ಹೊರಗೆ ಕಡ್ಡಾಯ ವರ್ಗಾವಣೆಗೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತ್ತು ಜಿಲ್ಲೆಯ ಹೊರಗೆ ಕಡ್ಡಾಯ ವರ್ಗಾವಣೆಗೊಂಡಿದ್ದ ಪ್ರೌಢಶಾಲಾ ಶಿಕ್ಷಕರನ್ನು ಅವರು ಈ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕು ಇಲ್ಲವೇ ಜಿಲ್ಲೆಯೊಳಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ADVERTISEMENT

ಆಯಾ ವಿಭಾಗದ ವಿಭಾಗೀಯ ಜಂಟಿ ನಿರ್ದೇಶಕರು ವರ್ಗಾವಣಾ ಕುಂದುಕೊರತೆ ನಿವಾರಣಾಧಿಕಾರಿಯಾಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‍ ಅನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ನಡೆಸಿದರೆ, ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್‍ನ್ನು ಇಲಾಖೆಯ ಆಯಾ ವಿಭಾಗೀಯ ಜಂಟಿ ನಿರ್ದೇಶಕರು ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿ/ಕಡ್ಡಾಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇದೇ 12ರಂದು ಆರಂಭವಾಗಲಿದ್ದು, ಸೆ.21ರಂದು ಕೌನ್ಸೆಲಿಂಗ್‌ ನಡೆಯಲಿದೆ. 2020-21ನೇ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇದೇ 27ರಂದು ಆರಂಭವಾಗಲಿದ್ದು, 2022ರ ಜನವರಿ 14ರಂದು ಕೌನ್ಸೆಲಿಂಗ್ ನಡೆಯಲಿದೆ.

ಸಾಮಾನ್ಯ ವರ್ಗಾವಣೆ:2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ಅಲ್ಲದೆ, ಈ ಹುದ್ದೆಗಳಿಗೆ ಸಮಾನವಾದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯೂ ಕೌನ್ಸೆಲಿಂಗ್ ಮೂಲಕ ನಡೆಯಲಿದೆ.

ತೀವ್ರ ಅನಾರೋಗ್ಯ, ಅಂಗವಿಕಲ, ಮೃತ ಸೈನಿಕರ ಶಿಕ್ಷಕ ಪತಿ ಅಥವಾ ಪತ್ನಿ, ಕೇಂದ್ರ ಅಥವಾ ರಾಜ್ಯ ಸರ್ಕಾರ ಇಲ್ಲವೇ ಅನುದಾನಿತ ಶಿಕ್ಷಣ ಸಂಸ್ಥೆ ನೌಕರರನ್ನು ಮದುವೆಯಾಗಿರುವ ಶಿಕ್ಷಕ, ಶಿಕ್ಷಕಿಯರಿಗೆ ವರ್ಗಾವಣೆಯಲ್ಲಿ ಅವಕಾಶ ಇರಲಿದೆ.

ಸಾಮಾನ್ಯ ವರ್ಗಾವಣೆಯಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಈ ಪ್ರಕ್ರಿಯೆಯು ಜುಲೈ 27ರಿಂದ ಆರಂಭವಾಗಲಿದ್ದು, 2022ರ ಫೆ. 26ರಂದು ಕೌನ್ಸೆಲಿಂಗ್ ನಡೆಯಲಿದೆ. ಪ್ರೌಢಶಾಲಾ ಶಿಕ್ಷಕರ ವೃಂದದ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಪ್ರಕ್ರಿಯೆಯು ನ. 17ರಿಂದ ಪ್ರಾರಂಭವಾಗಲಿದ್ದು, 2022 ಜ.29ರಂದು ಕೌನ್ಸಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡಲಾಗುತ್ತದೆ.

ವಿಭಾಗದೊಳಗಿನ ವರ್ಗಾವಣೆ ಕೋರಿಕೆ ಪ್ರಕ್ರಿಯೆಯು, ನ.17ರಿಂದ ಪ್ರಾರಂಭವಾಗಿ, 2022ರ ಫೆ.8ರಂದು ಮುಗಿಯಲಿದೆ. ಅದೇ ರೀತಿ ಅಂತರ್‌ ವಿಭಾಗೀಯ ವರ್ಗಾವಣೆ ಪ್ರಕ್ರಿಯೆಯು ನ.17ರಿಂದ ಪ್ರಾರಂಭವಾಗಿ, ಫೆ.26ಕ್ಕೆ ಕೌನ್ಸಲಿಂಗ್ ಮೂಲಕ ಮುಕ್ತಾಯಗೊಳ್ಳಲಿದೆ.

ವರ್ಗಾವಣಾ ಪ್ರಕ್ರಿಯೆ ನಿರ್ವಹಣೆಗೆಂದೇ ಪ್ರತ್ಯೇಕ ಸಹಾಯವಾಣಿ ರೂಪಿಸಲಾಗುತ್ತಿದೆ. ಅಲ್ಲದೆ, ಪೂರ್ಣ ಮಾಹಿತಿಗಾಗಿ, ಇಲಾಖೆಯ ವೆಬ್‌ಸೈಟ್‌ www.schooleducation.kar.nic.in ನೋಡಬಹುದು.

ಕಡ್ಡಾಯ ಶಿಕ್ಷಕರ ವರ್ಗಾವಣೆ ಪಟ್ಟಿ
ಜುಲೈ 12:
ಖಾಲಿ ಹುದ್ದೆಗಳ ವಿವರ ಪ್ರಕಟ
ಜುಲೈ 19: 2019-20ರಲ್ಲಿ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಯಾಗಿದ್ದ ಶಿಕ್ಷಕರ ಪಟ್ಟಿ ಪ್ರಕಟ
ಜುಲೈ 23ರಿಂದ 29: ಇತರೆ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಅವಕಾಶ
ಆ. 10ರಿಂದ 15: ಅರ್ಜಿ ಪರಿಶೀಲನೆ
ಆ.30: ಕೌನ್ಸೆಲಿಂಗ್ ಜೇಷ್ಠತಾ ಪಟ್ಟಿ ಪ್ರಕಟ
ಆ. 31ರಿಂದ ಸೆ. 2: ಆಕ್ಷೇಪಣೆಗೆ ಅವಕಾಶ
ಸೆ. 8: ಅಂತಿಮ ಕೌನ್ಸೆಲಿಂಗ್ ಅರ್ಹತಾ ಪಟ್ಟಿ
ಸೆ. 15ರಿಂದ: ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್
ಸೆ. 21ರಿಂದ: ಪ್ರೌಢಶಾಲಾ ಶಿಕ್ಷಕರ ಕೌನ್ಸೆಲಿಂಗ್

2020ರ ನ. 11ರ ಅಧಿಸೂಚನೆ ಅನ್ವಯ ಅರ್ಜಿ ಸಲ್ಲಿಸಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು

ಜು. 23ರಿಂದ ಆ.1: ಈಗಾಗಲೇ ವರ್ಗಾವಣೆ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ಅವಕಾಶ.
ಅ. 21ರಿಂದ 27: ಜಿಲ್ಲೆ ಮತ್ತು ವಿಭಾಗದ ಹೊರಗೆ ಅಥವಾ ಒಳಗೆ ಕೋರಿಕೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟ
ನ. 17: ಶಿಕ್ಷಕರ ಅಂತಿಮ ಪಟ್ಟಿ ಪ್ರಕಟ
ನ. 24ರಿಂದ ಡಿ. 9: ಜಿಲ್ಲಾ ಹಂತದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆ
ಡಿ. 16ರಿಂದ 21: ವಿಭಾಗೀಯ ಹಂತದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್
ಡಿ. 24ರಿಂದ 2022ರ ಜ.14: ಅಂತರ್‌ ವಿಭಾಗೀಯ ಹಂತದ ವರ್ಗಾವಣೆ ಕೌನ್ಸೆಲಿಂಗ್

2021 ಜೂ.30ರ ಅಧಿಸೂಚನೆ ಅನ್ವಯ ಹೊಸದಾಗಿ ಅರ್ಜಿ ಸಲ್ಲಿಸುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ

ಆ. 2ರಿಂದ ಸೆ.2: ಅರ್ಜಿ ಸಲ್ಲಿಕೆಗೆ ಅವಕಾಶ
ಅ. 23ರಿಂದ 28: ಜಿಲ್ಲೆ, ವಿಭಾಗದ ಒಳಗೆ ಮತ್ತು ಹೊರಗೆ ಕೋರಿಕೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ತಾತ್ಕಾಾಲಿಕ ಪಟ್ಟಿ ಪ್ರಕಟ
ನ. 18: ಶಿಕ್ಷಕರ ಅಂತಿಮ ಪಟ್ಟಿ ಪ್ರಕಟ
2022ರ ಜ.19ರಿಂದ 27: ಜಿಲ್ಲಾಮಟ್ಟದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ
ಫೆ.1ರಿಂದ 11: ವಿಭಾಗೀಯ ಹಂತದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್
ಫೆ. 15ರಿಂದ 26: ಅಂತರ್‌ ವಿಭಾಗೀಯ ಹಂತದ ವರ್ಗಾವಣೆ ಕೌನ್ಸೆಲಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.