ADVERTISEMENT

ಪ್ರಾಥಮಿಕ ಶಾಲಾರಂಭಕ್ಕೆ ಒತ್ತಡ

22ರಿಂದ 6ರಿಂದ 8 ನೇ ತರಗತಿಗಳು ಆರಂಭ l ಹಾಜರಾತಿ ಕಡ್ಡಾಯ ಅಲ್ಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 20:34 IST
Last Updated 16 ಫೆಬ್ರುವರಿ 2021, 20:34 IST
ಎಸ್‌. ಸುರೇಶ್‌ಕುಮಾರ್‌
ಎಸ್‌. ಸುರೇಶ್‌ಕುಮಾರ್‌   

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು ನಗರ ಮತ್ತು ಕೇರಳ ಗಡಿಭಾಗಕ್ಕೆ ಹೊಂದಿಕೊಂಡ ಭಾಗಗಳಲ್ಲಿ ಬಿಟ್ಟು, ಎಲ್ಲ ಕಡೆ ಇದೇ 22ರಿಂದ 6ನೇ ತರಗತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಬೆನ್ನಲ್ಲೇ, ಪ್ರಾಥಮಿಕ ಹಂತದಿಂದಲೇ (ಒಂದರಿಂದ 5ರವರೆಗೂ) ತರಗತಿಗಳನ್ನು ಆರಂಭಿಸುವಂತೆ ಒತ್ತಡ ಹೆಚ್ಚಲಾರಂಭಿಸಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್‌ ಅವರು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಮತ್ತು ಇತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದರು. ಬಳಿಕ ಫೇಸ್‌ಬುಕ್‌ನ ತಮ್ಮ ಪುಟದಲ್ಲಿ ನೇರ ಪ್ರಸಾರದಲ್ಲಿ ಮಾತನಾಡಿದ ಸಚಿವರು, 6ನೇ ತರಗತಿಯಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು.

ಈಗಾಗಲೇ ಆರಂಭವಾಗಿರುವ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ,ವಿದ್ಯಾರ್ಥಿಗಳ ಸುರಕ್ಷತೆ, ಕೋವಿಡ್ ನಿಯಮಗಳ ಪಾಲನೆ ಗಮನಿಸಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ 6ರಿಂದ 8ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಸಚಿವರ ಫೇಸ್‌ಬುಕ್ ಪುಟದಲ್ಲಿ ತಮ್ಮ ಬೇಡಿಕೆ ಮಂಡಿಸಿದ ಪೋಷಕರು, ವೀಕ್ಷಕರು, ಒಂದನೇ ತರಗತಿಯಿಂದಲೇ ಶಾಲೆಗಳನ್ನು ಆರಂಭಿಸುವಂತೆ ಒತ್ತಾಯಿಸಿದರು. ಅಲ್ಲದೆ, ಇತರ ಸಾಮಾಜಿಕ ಜಾಲ ತಾಣಗಳಲ್ಲೂ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸುವಂತೆ ಬೇಡಿಕೆ ವ್ಯಕ್ತವಾಗಿದೆ. ವಿ.ಪಿ. ನಿರಂಜನಾರಾಧ್ಯ ಸೇರಿದಂತೆ ಹಲವು ಶಿಕ್ಷಣ ತಜ್ಞರು ಈ ಹಿಂದೆಯೇ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

‘ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ರಾಜ್ಯದ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆ ಹಾಗೂ ಹೈಕೋರ್ಟ್‌ ಆಶಯದಂತೆ ಸುದೀರ್ಘ ಚರ್ಚೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ಕೋವಿಡ್‍ಗೆ ಸಂಬಂಧಿಸಿದ ವಿವರವಾದ ವರದಿಯೊಂದು ತಾಂತ್ರಿಕ ಸಲಹಾ ಸಮಿತಿ ಕೈಸೇರಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಒಂದರಿಂದ ಐದನೇ ತರಗತಿಗಳ ಆರಂಭ ಅಥವಾ ವಿದ್ಯಾಗಮ ಕಾರ್ಯಕ್ರಮ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಸುರೇಶ್‌ಕುಮಾರ್‌ ಹೇಳಿದರು.

ಹಾಜರಾತಿ ಕಡ್ಡಾಯವಲ್ಲ: ಇನ್ನು ಮುಂದೆ, ಈಗಾಗಲೇ ಶಾಲೆಗೆ ಹಾಜರಾಗುತ್ತಿರುವ ಮಕ್ಕಳ ಕೋವಿಡ್ ಯಾದೃಚ್ಛಿಕ (ರ‍್ಯಾಂಡಮ್ ಟೆಸ್ಟ್) ಪರೀಕ್ಷೆಯನ್ನು ಆರೋಗ್ಯ ಇಲಾಖೆ ಕೈಗೊಳ್ಳಲಿದೆ. ಆದರೆ, ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ. ಹಾಜರಾಗುವವರು ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯವಾಗಿ ತರಬೇಕು. ಆದರೂ, ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗದರ್ಶನದನ್ವಯ ಈಗಾಗಲೇ ನಡೆಯುತ್ತಿರುವ 9ರಿಂದ ಮೇಲಿನ ತರಗತಿಗಳಿಗೆ ಶೇ 70ರಿಂದ 89ರಷ್ಟು ಹಾಜರಾತಿ ಇದೆ’ ಎಂದು ಸುರೇಶ್‌ಕುಮಾರ್‌ ವಿವರಿಸಿದರು.

ಬೆಂಗಳೂರು; ಕೇರಳದ ಗಡಿಯಲ್ಲಿ 8ನೇ ತರಗತಿಯಿಂದ ಶಾಲೆ
‘ಕೋವಿಡ್‌ ಸೋಂಕು ಪ್ರಕರಣಗಳು ಮತ್ತೆ ಕಾಣಿಸಿಕೊಂಡ ಕಾರಣಕ್ಕೆ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಶಾಲೆಗಳಲ್ಲಿ 22ರಿಂದ ಎಂಟನೇ ತರಗತಿಯಿಂದ ಮಾತ್ರ ಶಾಲೆಗಳು ಆರಂಭವಾಗಲಿದೆ. ಈ ಪ್ರದೇಶಗಳಿಗೆ 6–7ನೇ ತರಗತಿಗಳಿಗೆ ‘ವಿದ್ಯಾಗಮ’ ಮುಂದುವರಿಯಲಿದೆ. ಕೇರಳ ಭಾಗದಿಂದ ಗಡಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ಫಲಿತಾಂಶವಿದ್ದರೆ ಮಾತ್ರವೇ ತರಗತಿಗೆ ಹಾಜರಾಗಲು ಅನುಮತಿ ನೀಡಲಾಗುವುದು’ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

ವಿಡಿಯೊ ಸಂವಾದ: ‘ಶಾಲೆಗಳ ಸುರಕ್ಷತೆ ಮತ್ತು ನಿಯಮಗಳ ಪಾಲನೆಯನ್ನು ಗಮನಿಸುವ ಹಾಗೂ ಸ್ಥಳೀಯ ಅಗತ್ಯಗಳಿಗೆ ಅನುಸಾರವಾಗಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ಕೆಲ ಮಾರ್ಗದರ್ಶಿ ಸೂತ್ರಗಳನ್ನು ವಿವರಿಸುವ ಸಂಬಂಧ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಲಾಗುವುದು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಲಯಗಳನ್ನು ತೆರೆಯಲಿದ್ದಾರೆ. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆಯ ನಿಗಮಗಳು ಬಸ್ ಚಾಲನೆಗೆ ಕ್ರಮಗಳನ್ನು ಕೈಗೊಳ್ಳಲಿವೆ. ಈ ಕುರಿತಂತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ’ ಎಂದೂ ಹೇಳಿದರು.

ಮುಂದಿನ ಶೈಕ್ಷಣಿಕ ವರ್ಷ ಜುಲೈ 15ರಿಂದ
2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು 2021ರ ಜುಲೈ 15ರಿಂದ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ 2021–22ನೇ ಶೈಕ್ಷಣಿಕ ವರ್ಷ ಏಪ್ರಿಲ್‌ 1ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.