ADVERTISEMENT

ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠ ಕೈ ಬಿಟ್ಟಿಲ್ಲ: ಸುರೇಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 18:30 IST
Last Updated 20 ಫೆಬ್ರುವರಿ 2021, 18:30 IST
ಸುರೇಶ್‌ ಕುಮಾರ್
ಸುರೇಶ್‌ ಕುಮಾರ್   

ಬೆಂಗಳೂರು: ‘ರಾಜ್ಯದ ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳನ್ನು ಕೈ ಬಿಟ್ಟಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಎಂದು ಹೇಳಿದ್ದಾರೆ.

‘ಬೌಧ ಧರ್ಮ ಮತ್ತು ಜೈನ ಧರ್ಮದ ಕುರಿತ ಪಾಠವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದ್ದಾರೆ.

‘ಆರನೇ ತರಗತಿಯ ಸಮಾಜವಿಜ್ಞಾನ ಭಾಗ–1ರ ಪಾಠದ ಪೀಠಿಕಾ ರೂಪದ ವಿವರಣೆಯಲ್ಲಿ ಅನಗತ್ಯ ಮತ್ತು ಆರನೇ ತರಗತಿಯ ಮಕ್ಕಳ ವಯೋಮಾನಕ್ಕೆ ಮೀರಿದ ಪಠ್ಯಾಂಶ ಇದೆ ಎಂಬ ಅನೇಕರ ಅಭಿಪ್ರಾಯಗಳಿಗೆ ಪೂರಕವಾಗಿ, ಅದನ್ನು ಕೈಬಿಡಲು ನಿರ್ಧರಿಸಲಾಗಿದೆ. ಆದರೆ, ಬೌದ್ಧ, ಜೈನ ಧರ್ಮಗಳ ಪರಿಚಯ ಪಾಠಗಳಿಗೆ ಕೊಕ್‌ ನೀಡಿಲ್ಲ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘2016–17ನೇ ಸಾಲಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೊಂಡಂದಿನಿಂದ ಪಠ್ಯಗಳು ಜಾರಿಯಲ್ಲಿವೆ. ನಮ್ಮ ಮಕ್ಕಳಲ್ಲಿ ಅನಗತ್ಯ ದ್ವೇಷದ ಭಾವನೆ ಬಿತ್ತಬಾರದು ಎನ್ನುವ ಸದುದ್ದೇಶದಿಂದ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ’ ಎಂದೂ ಸ್ಪಷ್ಟಪಡಿಸಿದ್ದಾರೆ.

‘1ರಿಂದ 10ನೇ ತರಗತಿಯ ಸಮಾಜವಿಜ್ಞಾನ ಮತ್ತು ಭಾಷಾ ವಿಷಯಗಳ ಯಾವುದೇ ಪಠ್ಯಗಳಲ್ಲಿ ಇರಬಹುದಾದ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರಬಹುದಾದ ವಿಷಯಗಳ ಕುರಿತು ಶಿಕ್ಷಕರು ಹಾಗೂ ತಜ್ಞರುಗಳನ್ನು ಒಳಗೊಂಡ ಸಮಿತಿ ರಚಿಸಿ, ಅವರಿಂದ ವರದಿ ಪಡೆದು ಕ್ರಮ ತೆಗೆದುಕೊಳ್ಳಲು ಕೂಡಾ ಉದ್ದೇಶಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಸುತ್ತೋಲೆಯಲ್ಲಿ ಪುಟ 82 ಮತ್ತು 83ರಲ್ಲಿನ ಅಂಶಗಳನ್ನು ಬೋಧಿಸಬಾರದು ಎಂದಿದೆ. 83ನೇ ಪುಟದಲ್ಲಿ ಬೌದ್ಧಧರ್ಮದ ವಿಷಯವಿದೆ. ಪಾಠ ಮಾಡುವಾಗ ಶಿಕ್ಷಕರಿಗೆ ಗೊಂದಲವಾಗಬಹುದು. ಪೀಠಿಕೆ ಮಾತ್ರ ಕೈಬಿಟ್ಟು ಉಳಿದ ಅಂಶಗಳನ್ನು ಬೋಧಿಸಬೇಕು ಎಂದು ಮತ್ತೊಂದು ಸುತ್ತೋಲೆ ಹೊರಡಿಸುವುದು ಸೂಕ್ತ’ ಎಂದು ಮುಖ್ಯಶಿಕ್ಷಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.