ADVERTISEMENT

ರಾಜ್ಯದಾದ್ಯಂತ ಅದ್ಧೂರಿ ‘ಈದ್ ಮಿಲಾದ್’ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 10:27 IST
Last Updated 21 ನವೆಂಬರ್ 2018, 10:27 IST
ಈದ್ ಮಿಲಾದ್ ಪ್ರಯುಕ್ತ ಕಾರವಾರದಲ್ಲಿ ಮುಸ್ಲಿಮರು ಬುಧವಾರ ಅದ್ಧೂರಿ ಮೆರವಣಿಗೆ ಆಯೋಜಿಸಿದ್ದರು.
ಈದ್ ಮಿಲಾದ್ ಪ್ರಯುಕ್ತ ಕಾರವಾರದಲ್ಲಿ ಮುಸ್ಲಿಮರು ಬುಧವಾರ ಅದ್ಧೂರಿ ಮೆರವಣಿಗೆ ಆಯೋಜಿಸಿದ್ದರು.    

ಬೆಂಗಳೂರು: ಈದ್ ಮಿಲಾದ್ ಪ್ರಯುಕ್ತ ಕಾರವಾರ, ಹೊಸಪೇಟೆ, ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಮುಸ್ಲಿಮರು ಬುಧವಾರ ಅದ್ಧೂರಿ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ಕಾರವಾರ ತಾಲ್ಲೂಕಿನ ಎಲ್ಲ ಮಸೀದಿಗಳ ವ್ಯಾಪ್ತಿಯಿಂದ ಮುಸ್ಲಿಮರು ಭಾಗವಹಿಸಿದ್ದರು.

ಕಾರವಾರ ಸುನ್ನಿ ಮುಸ್ಲಿಂ ಸಂಘದಿಂದ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಈ ಬಾರಿ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ, ಮದೀನಾದ ಪ್ರತಿಕೃತಿಗಳ ಆಕರ್ಷಣೆಯಿತ್ತು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ನೂರಾರು ಜನರು ಸಂಭ್ರಮಿಸಿದರು.

ADVERTISEMENT

ಕೋಡಿಬಾಗ ರಸ್ತೆಯುದ್ದಕ್ಕೂ ಹಸಿರು, ಕೇಸರಿ ಬಣ್ಣದ ಧ್ವಜಗಳನ್ನು ಹಿಡಿದು ಮೊಹಮ್ಮದ್ ಪೈಗಂಬರರ ಜನ್ಮ ದಿನವನ್ನು ಆಚರಿಸಿದರು.
ಆಚರಣೆಯ ಅಂಗವಾಗಿ ಸಂಘವು ಸಾರ್ವಜನಿಕರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿದೆ.

ಬೆಳಗಾವಿ: ನಗರದಲ್ಲಿ ಮುಸ್ಲಿಮರಿಂದ ಈದ್ ಮಿಲಾದ್ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಪಿಂಪಳ್ ಕಟ್ಟಾದಿಂದ ಆರಂಭವಾದ ಮೆರವಣಿಗೆ ಸಂಗೊಳ್ಳಿರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತ, ಕಾಲೇಜು ರಸ್ತೆಯಲ್ಲಿ ಸಾಗಿತು.

ಮೆರವಣಿಗೆ ಉದ್ಘಾಟನೆ ವೇಳೆ ಕಾಂಗ್ರೆಸ್ ಮುಖಂಡ ಫಿರೋಜ್ ಸೇಠ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್, ನಗರ ಯುವ ಘಟಕದ ಅಧ್ಯಕ್ಷ ಫೈಜಾನ್ ಸೇಠ್, ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ್, ಎಸಿಪಿ ಎನ್.ವಿ. ಬರಮನಿ ಭಾಗವಹಿಸಿದ್ದರು.


ಹೊಸಪೇಟೆ: ಈದ್ ಮಿಲಾದ ಪ್ರಯುಕ್ತ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಹಸಿರು ವರ್ಣದ ಧ್ವಜಗಳು, ಮೆಕ್ಕಾ ಮದೀನಾ ಪ್ರತಿಕೃತಿಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.

ವಿವಿಧ ಕಡೆಗಳಿಂದ ನೂರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ದಾವಣಗೆರೆ: ಈದ್ ಮಿಲಾದ್ ಪ್ರಯುಕ್ತ ನಗರದಲ್ಲಿ ಮೆರವಣಿಗೆ ನಡೆಯಿತು.ಪೈಗಂಬರ್ ಬಗ್ಗೆ ಹಾಡು, ಮೆಕ್ಕಾ, ಮದೀನಾ ಪ್ರತಿಕೃತಿಗಳು ಮೆರವಣಿಗೆಯಲ್ಲಿ ಪ್ರಮುಖವಾಗಿ ಕಂಡುಬಂದವು. ನಗರದ ವಿವಿಧ ಭಾಗಗಳಿಂದ ಮೆರವಣಿಗೆಯಲ್ಲಿ ಬಂದ ಮುಸ್ಲಿಮರು ಪಿ.ಬಿ. ರಸ್ತೆಯಲ್ಲಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.