ADVERTISEMENT

ಎಂಟು ಪಾಲಿಕೆಗಳ ಮೇಯರ್‌, ಉಪ ಮೇಯರ್‌ ಮೀಸಲಾತಿ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:17 IST
Last Updated 30 ಸೆಪ್ಟೆಂಬರ್ 2022, 16:17 IST

ಬೆಂಗಳೂರು: ರಾಜ್ಯದ ಎಂಟು ಮಹಾನಗರ ಪಾಲಿಕೆಗಳ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳ ಮೀಸಲಾತಿಯನ್ನು ಬದಲಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ರಾಜ್ಯದ ಹತ್ತು ಮಹಾನಗರ ಪಾಲಿಕೆಗಳ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸಿ ಆಗಸ್ಟ್‌ 24 ರಂದು ಆದೇಶ ಹೊರಡಿಸಲಾಗಿತ್ತು. ಅದೇ ಮೀಸಲಾತಿ ಪ್ರಕಾರ ಮೈಸೂರು ಮತ್ತು ತುಮಕೂರು ಪಾಲಿಕೆಗಳ ಮೇಯರ್‌, ಉಪ ಮೇಯರ್‌ ಆಯ್ಕೆಗೆ ಚುನಾವಣೆ ನಡೆಸಲಾಗಿತ್ತು. ಮೀಸಲಾತಿ ನಿಗದಿಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ಕೆಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿನ ಲೋಪವಾಗಿರುವ ಕಾರಣದಿಂದ ಈ ಪ್ರಕ್ರಿಯೆಯನ್ನು ಪುನಃ ನಡೆಸಬೇಕು’ ಎಂದು ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ಆದೇಶದ ಅನುಸಾರ ಎಂಟು ಪಾಲಿಕೆಗಳ ಮೇಯರ್‌, ಉಪ ಮೇಯರ್‌ ಸ್ಥಾನಗಳ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ. ಈಗಾಗಲೇ ಚುನಾವಣೆ ನಡೆದಿರುವುದರಿಂದ ಮೈಸೂರು ಮತ್ತು ತುಮಕೂರು ಪಾಲಿಕೆಗಳಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ.

ADVERTISEMENT

ಪರಿಷ್ಕೃತ ಮೀಸಲಾತಿ ವಿವರ: ಬಳ್ಳಾರಿ: ಮೇಯರ್‌– ಸಾಮಾನ್ಯ; ಉಪ ಮೇಯರ್‌– ಸಾಮಾನ್ಯ ಮಹಿಳೆ. ಬೆಳಗಾವಿ: ಮೇಯರ್‌– ಸಾಮಾನ್ಯ ಮಹಿಳೆ; ಉಪ ಮೇಯರ್‌– ಸಾಮಾನ್ಯ. ದಾವಣಗೆರೆ: ಮೇಯರ್‌– ಪರಿಶಿಷ್ಟ ಪಂಗಡ; ಉಪ ಮೇಯರ್‌– ಸಾಮಾನ್ಯ ಮಹಿಳೆ. ಹುಬ್ಬಳ್ಳಿ– ಧಾರವಾಡ: ಸಾಮಾನ್ಯ ಮಹಿಳೆ; ಉಪ ಮೇಯರ್‌– ಹಿಂದುಳಿದ ವರ್ಗ–ಬಿ. ಕಲಬುರಗಿ: ಮೇಯರ್‌– ಹಿಂದುಳಿದ ವರ್ಗ–ಎ; ಉಪ ಮೇಯರ್‌– ಸಾಮಾನ್ಯ ಮಹಿಳೆ. ಮಂಗಳೂರು: ಮೇಯರ್‌– ಸಾಮಾನ್ಯ; ಉಪ ಮೇಯರ್‌– ಪರಿಶಿಷ್ಟ ಜಾತಿ ಮಹಿಳೆ. ಶಿವಮೊಗ್ಗ: ಮೇಯರ್‌– ಪರಿಶಿಷ್ಟ ಜಾತಿ; ಉಪ ಮೇಯರ್‌– ಹಿಂದುಳಿದ ವರ್ಗ– ಎ ಮಹಿಳೆ. ವಿಜಯಪುರ: ಹಿಂದುಳಿದ ವರ್ಗ–ಎ ಮಹಿಳೆ; ಉಪ ಮೇಯರ್‌– ಸಾಮಾನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.