ADVERTISEMENT

ಶಿವಮೊಗ್ಗದ ಮೂರು ಕಡೆ ಚುನಾವಣೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:03 IST
Last Updated 29 ಅಕ್ಟೋಬರ್ 2018, 20:03 IST

ಶಿವಮೊಗ್ಗ:ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಿಲ್ಲೆಯ ಮೂರು ಗ್ರಾಮಗಳ ಗ್ರಾಮಸ್ಥರು ನ. 3ರಂದು ನಡೆಯುವ ಲೋಕಸಭಾ ಉಪಚುನಾವಣೆ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಾಗರ ತಾಲ್ಲೂಕು ಬಾರಂಗಿ ಹೋಬಳಿಯ ಕಾನೂರು, ಭಾನುಕುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉರುಳುಗಲ್ಲು ಹಾಗೂ ಶಿವಮೊಗ್ಗ ತಾಲ್ಲೂಕು ಹಾಡೋನಹಳ್ಳಿ ಚುನಾವಣೆ ಬಹಿಷ್ಕರಿಸಿದ ಗ್ರಾಮಗಳು.

ರಸ್ತೆ, ಶಾಲೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು. ಅರಣ್ಯ ಕಾಯ್ದೆಯ ನೆಪದಲ್ಲಿ ಅರಣ್ಯಾಧಿಕಾರಿಗಳ ಕಿರುಕುಳ ವಿರೋಧಿಸಿ ಬಾರಂಗಿ ಹಾಗೂ ಉರುಳುಗಲ್ಲು ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಬೇಡಿಕೆ ಈಡೇರಿಸಿಲ್ಲ. ಹಾಗಾಗಿ, ಇಂತಹ ನಿರ್ಧಾರ ಅನಿವಾರ್ಯವಾಗಿದೆ ಎಂದು ಮುಖಂಡರು ಮಾಹಿತಿ ನೀಡಿದರು.

ADVERTISEMENT

12 ಜನ ಮೃತಪಟ್ಟರೂಅದೇ ಸ್ಥಿತಿ:

ಹಾಡೋನಳ್ಳಿ ಗ್ರಾಮದಲ್ಲಿ ಮತ್ತೆ ಮರಳು ಗಣಿಗಾರಿಕೆ ಆರಂಭವಾಗಿದೆ. ಹಿಂದೆ ಇದೇ ರೀತಿ ನದಿ ಪಾತ್ರದಲ್ಲಿ ಮರಳು ತೆಗೆದು ಬೃಹತ್ ಗುಂಡಿಗಳು ನಿರ್ಮಾಣವಾದ ಕಾರಣ ಎರಡು ವರ್ಷಗಳ ಹಿಂದೆ ಗಣಪತಿ ವಿಸರ್ಜನೆಗೆ ಹೋಗಿದ್ದ ತೆಪ್ಪ ಮುಳುಗಿ 12 ಯುವಕರು ಮೃತಪಟ್ಟಿದ್ದರು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ ಮತ್ತೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದೆ ಎಂದು ಎಚ್‌.ಎಂ. ಜಗದೀಶ್, ಮಲ್ಲೇಶಪ್ಪ, ಎಸ್.ಎಂ. ಮಂಜಪ್ಪ, ಎಚ್.ಜಿ. ಶಿವಣ್ಣ ಗೌಡ್ರು, ಗುರುಶಾಂತಪ್ಪ ದೂರಿದರು.

ಯಾವುದೇ ರಾಜಕೀಯ ಪಕ್ಷಗಳು ಗ್ರಾಮಕ್ಕೆ ಸಮರ್ಪಕವಾದ ಅಭಿವೃದ್ಧಿ ಯೋಜನೆ ನೀಡಿಲ್ಲ. ರಸ್ತೆಗಳು ಸಂಊರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸಿಲ್ಲ. ಹಾಗಾಗಿ, ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.