ADVERTISEMENT

ನೀತಿ ಸಂಹಿತೆಗೆ ‘ಚಪ್ಪಲಿ ಪುರಾಣ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 22:05 IST
Last Updated 10 ಮಾರ್ಚ್ 2020, 22:05 IST
   

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಎಂಬುದು ಅಧಿಕಾರಿಗಳಿಗೆ ಸೇಡು ತೀರಿಸಿಕೊಳ್ಳಲು ಇರುವ ಅಸ್ತ್ರ, ಕೆಲವೊಂದು ಬಾರಿಯಂತೂ ಮೂತ್ರ ವಿಸರ್ಜನೆಗೂ ಬಿಡದಂತಹ ಪರಿಸ್ಥಿತಿಯನ್ನು ನಿರ್ಮಿಸಿಬಿಟ್ಟಿರುತ್ತಾರೆ ಎಂಬ ಅಭಿಪ್ರಾಯ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಪಕ್ಷಾತೀತವಾಗಿ ವ್ಯಕ್ತವಾಯಿತು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂವಿಧಾನ ಕುರಿತು ವಿಚಾರ ಮಂಡಿಸುತ್ತ, ಚುನಾವಣಾ ಸುಧಾರಣೆಗೆ ಜಾರಿಗೆ ಬಂದ ನೀತಿ ಸಂಹಿತೆಯನ್ನು ಅಧಿಕಾರಿಗಳು ದುರ್ಬಳಕೆ ಮಾಡುತ್ತಿರುವುದರ ಬಗ್ಗೆ ಗಮನ ಸೆಳೆದರು.

ಆಗ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಪ್ಪಲಿ ಪುರಾಣ ಬಿಚ್ಚಿಟ್ಟರು. ‘ದೇವಸ್ಥಾನದಲ್ಲಿ ಪಾದರಕ್ಷೆ ಬಿಟ್ಟು ಹೋಗಬೇಕು ಎಂಬ ನಿಯಮ ರೂಪಿಸಲಾಗಿರುತ್ತದೆ, ಅಲ್ಲಿನ ಕಾವಲುಗಾರ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಾನೆ. ಒಮ್ಮೆ ಒಬ್ಬ ಭಕ್ತ ಮನೆಯಿಂದ ಬರಿಗಾಲಲ್ಲೇ ದೇವಸ್ಥಾನಕ್ಕೆ ಬರುತ್ತಾನೆ, ನಿಯಮ ಪಾಲನೆಗೆ ನಿಂತಿದ್ದ ಕಾವಲುಗಾರ, ಚಪ್ಪಲಿ ಇಲ್ಲಿ ಬಿಟ್ಟು ಹೋಗಬೇಕು, ನೀವು ಮನೆಗೆ ಹೋಗಿ ಮತ್ತೆ ಚಪ್ಪಲಿ ಹಾಕಿಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದನಂತೆ...’ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.

ADVERTISEMENT

ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ತಾವು ಮುಖ್ಯಮಂತ್ರಿಯಾಗಿದ್ದಾಗ ಐಬಿಯಲ್ಲಿ ಶೌಚಾಲಯಕ್ಕೆ ಹೋಗಲು ಸಹ ಅವಕಾಶ ನೀಡದ್ದನ್ನು ಉಲ್ಲೇಖಿಸಿದರು.

‘ಅಧಿಕಾರಿಗಳು 4 ವರ್ಷ, 11 ತಿಂಗಳ ಸಿಟ್ಟನ್ನು ತೀರಿಸುವುದು ಈ ನೀತಿ ಸಂಹಿತೆ ಅವಧಿಯಲ್ಲಿ’ ಎಂದ ಸಿ.ಎಂ.ಇಬ್ರಾಹಿಂ, ‘ಸಂವಿಧಾನದ ಆಶಯ ಪಾಲನೆಯಾಗುತ್ತಿಲ್ಲ ಎಂಬ ನೀವು ಮಾತನಾಡುವುದನ್ನು ನೋಡಿದರೆ ನೀವು ಎಷ್ಟು ದಿನ ಇರುತ್ತೀರೋ ಎಂಬ ಭಯ ಇದೆ’ ಎಂದು ಸಚಿವ ಮಾಧುಸ್ವಾಮಿ ಅವರ ಕಾಲೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.