ADVERTISEMENT

ಉಪ ಚುನಾವಣೆಗೆ ಅಖಾಡ ಅಣಿ: ಶಿವಮೊಗ್ಗಕ್ಕೆ ಮಧು ಬಂಗಾರಪ್ಪ, ಮಂಡ್ಯಕ್ಕೆ ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 20:19 IST
Last Updated 14 ಅಕ್ಟೋಬರ್ 2018, 20:19 IST
ಶಿವರಾಮೇಗೌಡ, ಮಧು ಬಂಗಾರಪ್ಪ
ಶಿವರಾಮೇಗೌಡ, ಮಧು ಬಂಗಾರಪ್ಪ   

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಅಖಾಡ ಸಿದ್ಧಗೊಂಡಿದೆ.

ನವೆಂಬರ್‌ 3 ರಂದು ನಡೆಯುವ ಚುನಾ ವಣೆಗೆನಾಮಪತ್ರ ಸಲ್ಲಿಸಲು ಇದೇ 16 ಕಡೆಯ ದಿನವಾಗಿದ್ದು, ಬಹುತೇಕ ಎಲ್ಲ ಅಭ್ಯರ್ಥಿಗಳು ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. ಮೂರು ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿ
ಗಳನ್ನು ಗೆಲ್ಲಿಸಿಕೊಳ್ಳಲು ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ.

ಈ ಕ್ಷೇತ್ರಗಳಲ್ಲಿ ದೋಸ್ತಿ ಪಕ್ಷಗಳ ಅಭ್ಯರ್ಥಿಗಳು ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಹಣಾಹಣಿಯಿದೆ. ಇನ್ನು 20 ದಿನ ಈ ಕ್ಷೇತ್ರಗಳೇ ರಾಜಕೀಯ ಕೇಂದ್ರಗಳಾಗಲಿವೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ರಾಮನಗರದಲ್ಲಿ ತಮ್ಮ ಪತ್ನಿ ಅನಿತಾ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಭಾಗಿಯಾಗಲಿದ್ದಾರೆ.

ADVERTISEMENT

ಮಧು ಬಂಗಾರಪ್ಪ ಕಣಕ್ಕೆ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಎದುರು ಸ್ಪರ್ಧಿಸಲು ಕಾಂಗ್ರೆಸ್ ನಾಯಕರು ಮುಂದಾಗಲಿಲ್ಲ. ಹೀಗಾಗಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್‌ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಬಾರಿ ಗೀತಾ ಬದಲು ಅವರ ತಮ್ಮ, ಮಾಜಿಶಾಸಕ ಮಧು ಬಂಗಾರಪ್ಪಅವರನ್ನು ಕಣಕ್ಕೆ ಇಳಿಸಲು ಜೆಡಿಎಸ್‌ ನಿರ್ಧರಿಸಿದೆ.

ಭಾರಿ ಪೈಪೋಟಿ ಇದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸುವಲ್ಲಿ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಯಶಸ್ವಿಯಾಗಿದ್ದಾರೆ. ರಾಜಕೀಯ ಪ್ರವೇಶಿಸಲು ಐಆರ್‌ಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದ ಲಕ್ಷ್ಮಿ ಅಶ್ವಿನ್ ಗೌಡ ಈ ಕ್ಷೇತ್ರದಆಕಾಂಕ್ಷಿಯಾಗಿದ್ದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ನಿವಾಸದಲ್ಲಿ ಭಾನುವಾರನಡೆದ ಮುಖಂಡರ ಸಭೆಯಲ್ಲಿಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.

ಬಳ್ಳಾರಿಗೆ ವೆಂಕಟೇಶ ಪ್ರಸಾದ್‌: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಸಹೋದರ ವೆಂಕಟೇಶ್‌ಪ್ರಸಾದ್ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ವೆಂಕಟೇಶ್ ಪ್ರಸಾದ್‌, 2014ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಉಸ್ತುವಾರಿ ನೇಮಕ: ಮಿತ್ರ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಿವಮೊಗ್ಗಕ್ಕೆ ಸಚಿವ ಆರ್‌.ವಿ.ದೇಶಪಾಂಡೆ, ಮಂಡ್ಯಕ್ಕೆ ಸಚಿವ ಕೆ.ಜೆ.ಜಾರ್ಜ್‌ ಮತ್ತುರಾಮನಗರ ಕ್ಷೇತ್ರಕ್ಕೆ ಸಂಸದ ಡಿ.ಕೆ.ಸುರೇಶ್‌ ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ಕಾಂಗ್ರೆಸ್‌ ಪಕ್ಷ ನೇಮಿಸಿದೆ.

**

ಕಣ್ಣೀರಿಟ್ಟ ಲಕ್ಷ್ಮಿ...

ಟಿಕೆಟ್‌ ಕೈ ತಪ್ಪಿದ್ದರಿಂದ ತೀವ್ರವಾಗಿ ನೊಂದ ಲಕ್ಷ್ಮಿ ಅಶ್ವಿನ್ ಗೌಡ ಕಣ್ಣೀರು ಹಾಕುತ್ತಾ ದೇವೇಗೌಡರ ಮನೆಯಿಂದ ಹೊರ ನಡೆದರು.

ಭಾರಿ ಪೈಪೋಟಿ ಇದ್ದರೂ ಲಕ್ಷ್ಮಿ ಅವರಿಗೆ ಟಿಕೆಟ್ ಖಚಿತ ಎಂದು ಹೇಳಲಾಗಿತ್ತು. ಕೊನೆಗಳಿಗೆಯಲ್ಲಿ ಕೈ ತಪ್ಪಿದ್ದರಿಂದಾಗಿ ಅವರು ಆಘಾತಕ್ಕೆ ಒಳಗಾದರು. ‘ನಿಮಗೆ ಇನ್ನೂ ವಯಸ್ಸಿದೆ. ದೀರ್ಘಕಾಲ ರಾಜಕಾರಣ ಮಾಡಬಹುದು. ನಾಲ್ಕೂವರೆ ತಿಂಗಳಿಗಾಗಿ ಏಕೆ ಆಸೆ ಪಡುತ್ತೀರಿ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇನೆ’ ಎಂದು ಲಕ್ಷ್ಮಿ ಅವರಿಗೆದೇವೇಗೌಡರು ಭರವಸೆ ನೀಡಿದರು.

**

ಕಣದಿಂದ ಹಿಂದೆ ಸರಿದ ಕಾಂಗ್ರೆಸ್‌

ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಜಿಸಿ, ಶಿವಮೊಗ್ಗದ ಸ್ಪರ್ಧಾಕಣದಿಂದಲೇ ಹಿಂದೆ ಸರಿದಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದ ಕಡೆ ಬಿಜೆಪಿ ಗೆದ್ದಿದೆ.

ಉಪ ಚುನಾವಣೆಯಲ್ಲಿ ಸೋತರೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದೆ. ಸೋಲಿನ ಭಾರವನ್ನು ಮಿತ್ರ ಪಕ್ಷ ಜೆಡಿಎಸ್‌ ಹೊರಲಿ ಎಂಬುದು ನಾಯಕರ ನಿಲುವು ಎಂದು ಮೂಲಗಳು ಹೇಳಿವೆ.

**

ಅಭ್ಯರ್ಥಿಗಳ ಪಟ್ಟಿ

ಶಿವಮೊಗ್ಗ ಲೋಕಸಭಾ ಕ್ಷೇತ್ರ

*ಮಧು ಬಂಗಾರಪ್ಪ(ಜೆಡಿಎಸ್‌)

* ಬಿ.ವೈ.ರಾಘವೇಂದ್ರ(ಬಿಜೆಪಿ),

ಮಂಡ್ಯ ಲೋಕಸಭಾ ಕ್ಷೇತ್ರ

* ಎಲ್‌.ಆರ್‌.ಶಿವರಾಮೇಗೌಡ(ಜೆಡಿಎಸ್‌)

* ಡಾ. ಸಿದ್ದರಾಮಯ್ಯ(ಬಿಜೆಪಿ)

ಬಳ್ಳಾರಿ ಲೋಕಸಭಾ ಕ್ಷೇತ್ರ

* ಜೆ.ಶಾಂತಾ(ಬಿಜೆಪಿ)

* ವೆಂಕಟೇಶ ಪ್ರಸಾದ್‌(ಕಾಂಗ್ರೆಸ್‌)

ರಾಮನಗರ ವಿಧಾನಸಭಾ ಕ್ಷೇತ್ರ

* ಅನಿತಾ ಕುಮಾರಸ್ವಾಮಿ(ಜೆಡಿಎಸ್‌)

* ಎಲ್. ಚಂದ್ರಶೇಖರ್‌(ಬಿಜೆಪಿ)

ಜಮಖಂಡಿ ವಿಧಾನಸಭಾ ಕ್ಷೇತ್ರ

* ಆನಂದ ಸಿದ್ದು ನ್ಯಾಮಗೌಡ(ಕಾಂಗ್ರೆಸ್‌)

* ಶ್ರೀಕಾಂತ ಕುಲಕರ್ಣಿ(ಬಿಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.