ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಪ್ರತಿನಿತ್ಯ 17 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆ ಇದ್ದು, ಮುಂದಿನ ಎರಡು ತಿಂಗಳಲ್ಲಿ ನಿತ್ಯದ ಬೇಡಿಕೆಯು 19 ಸಾವಿರ ಮೆಗಾವ್ಯಾಟ್ ಗಡಿ ದಾಟುವ ಸಾಧ್ಯತೆ ಇದೆ ಎಂದು ಇಂಧನ ಇಲಾಖೆ ಅಂದಾಜಿಸಿದೆ.
ಜನವರಿ ತಿಂಗಳಲ್ಲೇ ಮನೆಗಳಲ್ಲಿ ಫ್ಯಾನ್, ಎಸಿಗಳ ಉಪಯೋಗ ಹೆಚ್ಚಾಗಿದೆ. ಕಳೆದ ವರ್ಷ ಹೆಚ್ಚಿನ ಮಳೆಯಾದ ಕಾರಣ ಸಾಗುವಳಿ ಪ್ರದೇಶವೂ ವಿಸ್ತರಿಸಿದೆ. ಪರಿಣಾಮವಾಗಿ ಕೃಷಿ ಪಂಪ್‌ಸೆಟ್‌ಗಳ ಬಳಕೆಯೂ ಏರುತ್ತಿದೆ. ಇನ್ನೊಂದೆಡೆ ಗೃಹ ಜ್ಯೋತಿ ಯೋಜನೆಯೂ ವಿದ್ಯುತ್ ಬೇಡಿಕೆ ಹೆಚ್ಚಲು ಕಾರಣವಾಗಿದೆ.
ಜನವರಿಯಲ್ಲಿ ನಿತ್ಯ ಸರಾಸರಿ 290 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಫೆಬ್ರುವರಿ ಆರಂಭದಲ್ಲೇ 300 ದಶಲಕ್ಷ ಯೂನಿಟ್ ದಾಟಿತ್ತು. ಫೆ.17ರ ಪ್ರಕಾರ 321 ದಶಲಕ್ಷ ಯೂನಿಟ್ ಬಳಕೆಯಾಗಿದೆ. ರಾಜ್ಯದಲ್ಲಿ ಸದ್ಯ 16,662 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕೊರತೆ ಸರಿದೂಗಿಸುವುದಕ್ಕಾಗಿ ಇಂಧನ ಇಲಾಖೆ ವಿದ್ಯುತ್ ಖರೀದಿಗೆ ಮುಂದಾಗಿದೆ.
ಮೂರು ವರ್ಷಗಳಿಂದ ಪ್ರತಿ ವರ್ಷ ಒಂದು ಸಾವಿರ ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. 2023ರಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿತ್ತು. ಒಳ ಹರಿವೂ ತಗ್ಗಿತ್ತು. ಜಲ ವಿದ್ಯುತ್ ಉತ್ಪಾದನೆಯೂ ಕುಸಿದಿತ್ತು. ಕಳೆದ ವರ್ಷ ಜನವರಿಯಲ್ಲೇ ವಿದ್ಯುತ್ ಅಭಾವವಾಗಿ, ಅನಿಯಮಿತ ಲೋಡ್‌ಶೆಡ್ಡಿಂಗ್ ಮಾಡಲಾಗಿತ್ತು.
ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿತ್ತು. ಜಲಾಶಯಗಳೆಲ್ಲ ಭರ್ತಿಯಾಗಿವೆ. ಜಲವಿದ್ಯುತ್ ಉತ್ಪಾದನೆ ಆಶಾದಾಯಕವಾಗಿದೆ. ಇಂಧನ ಇಲಾಖೆ ಮಾಹಿತಿ ಪ್ರಕಾರ ಇದೇ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮುಂದುವರಿದರೂ, ಮುಂದಿನ 160 ದಿನಗಳವರೆಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸುವಷ್ಟು ನೀರು ಜಲಾಶಯಗಳಲ್ಲಿ ಇದೆ.
ದಾಖಲೆಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 34 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಇದರಲ್ಲಿ 2.3 ಲಕ್ಷ ಅಕ್ರಮ ಪಂಪ್‌ಸೆಟ್‌ಗಳು. ಉತ್ಪಾದಿತ ವಿದ್ಯುತ್‌ನಲ್ಲಿ ಶೇಕಡ 35 ರಷ್ಟು ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರದ ಆದೇಶದಂತೆ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಹಗಲಲ್ಲಿ 4 ತಾಸು ಮತ್ತು ರಾತ್ರಿ ವೇಳೆ 3 ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಈ ಲೆಕ್ಕಾಚಾರದಂತೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಪ್ರಮಾಣವು ಶೇ 40ರಷ್ಟು ಹೆಚ್ಚಾಗಬಹುದೆಂಬ ನಿರೀಕ್ಷೆ ಇದೆ.
ಬೇಸಿಗೆಯಲ್ಲಿ ಎದುರಾಗಲಿರುವ ವಿದ್ಯುತ್ ಕೊರತೆಯನ್ನು ಸಮರ್ಥವಾಗಿ ನಿರ್ವಹಿಸಲು ಇಂಧನ ಇಲಾಖೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ದೀರ್ಘಾವಧಿಗೆ ವಿದ್ಯುತ್ ಖರೀದಿಸಲು ಮುಂದಾಗಿದೆ. ಇದರಿಂದ ಕಡಿಮೆ ದರಕ್ಕೆ ವಿದ್ಯುತ್ ಲಭ್ಯವಾಗುತ್ತದೆ ಎಂಬುದು ಇಲಾಖೆಯ ಲೆಕ್ಕಾಚಾರ. ಈಗಾಗಲೇ ಫೆಬ್ರುವರಿಯಲ್ಲಿ 300 ಮೆಗಾವ್ಯಾಟ್ ಖರೀದಿಸಿದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಲಾ 500 ಮೆಗಾವ್ಯಾಟ್‌ಗೂ ಹೆಚ್ಚು ವಿದ್ಯುತ್ ಖರೀದಿಸಲಾಗುತ್ತದೆ ಎಂದು ಪಿಸಿಕೆಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.