ADVERTISEMENT

ಕೋವಿಡ್‌ ಬಿಕ್ಕಟ್ಟು: ಅಕ್ಟೋಬರ್‌ನಿಂದ ಮತ್ತೆ ‘ವಿದ್ಯುತ್ ಶಾಕ್‘ !

ಪ್ರಸಕ್ತ ತ್ರೈಮಾಸಿಕ ಅವಧಿ ಮುಗಿದ ನಂತರ ಮೊದಲಿನ ದರ ‘ಹೇರಿಕೆ’

ಗುರು ಪಿ.ಎಸ್‌
Published 31 ಆಗಸ್ಟ್ 2021, 22:13 IST
Last Updated 31 ಆಗಸ್ಟ್ 2021, 22:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಏನಿದು, ಪ್ರತಿ ತಿಂಗಳಿಗಿಂತ ಈಗ ₹150ರಿಂದ ₹300 ರವರೆಗೆ ಕಡಿಮೆ ವಿದ್ಯುತ್‌ ಶುಲ್ಕ ಬರುತ್ತಿದೆ ಎಂದು ನೀವು ಖುಷಿ ಪಡುತ್ತಿರಬಹುದು. ಆದರೆ, ಈ ಸಂಭ್ರಮ ಸೆಪ್ಟೆಂಬರ್‌ವರೆಗೆ ಮಾತ್ರ. ಅಕ್ಟೋಬರ್‌ನಿಂದ ವಿದ್ಯುತ್‌ ದರವೂ ಏರಿಕೆಯ ಮುಗಿಲೆಡೆಗೆ ಸಾಗಲಿದೆ.

ಈ ತ್ರೈಮಾಸಿಕದಲ್ಲಿ (ಜುಲೈ,ಆಗಸ್ಟ್‌ ಮತ್ತು ಸೆಪ್ಟೆಂಬರ್‌) ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ಪ್ರತಿ ಯುನಿಟ್‌ಗೆ ಸರಾಸರಿ 50 ಪೈಸೆ ಕಡಿಮೆ ಮಾಡಿವೆ. ಈ ದುಬಾರಿ ಕಾಲದಲ್ಲಿ ವಿದ್ಯುತ್‌ ಬಿಲ್‌ಗಳು ಮಾತ್ರ ಆಪ್ಯಾಯಮಾನವಾಗಿ ಕಾಣಲು ಇದೂ ಕಾರಣ. ವಿದ್ಯುತ್‌ ಉತ್ಪಾದಕ ಕಂಪನಿಗಳು ವಿದ್ಯುತ್‌ ಖರೀದಿ ದರವನ್ನು ಕಡಿಮೆ ಮಾಡಿರುವುದರಿಂದ ಎಸ್ಕಾಂಗಳು ಪ್ರತಿ ಯುನಿಟ್‌ಗೆ 50 ಪೈಸೆ ‘ಕೊಡುಗೆ’ಯನ್ನು ಬಳಕೆದಾರರಿಗೆ ನೀಡುತ್ತಿವೆ. ಆದರೆ, ಇದು ಸೀಮಿತ ಅವಧಿಯ ‘ಕೊಡುಗೆ’.

ಎಸ್ಕಾಂಗಳು ವಿದ್ಯುತ್‌ ಉತ್ಪಾದನಾ ಕಂಪನಿಗಳೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳುತ್ತವೆ. ಇದು 25 ವರ್ಷಗಳ ಅವಧಿಯ ಒಪ್ಪಂದ. ಈ ಒಪ್ಪಂದದ ದರದ ಜೊತೆಗೆ ವ್ಯತ್ಯಾಸದ ಮೊತ್ತವು ಪ್ರತಿ ತ್ರೈಮಾಸಿಕ ಅವಧಿಗೆ ಹೆಚ್ಚುತ್ತಾ ಹೋಗುತ್ತದೆ. ವಿದ್ಯುತ್‌ ಖರೀದಿ ದರವು 2019ರಲ್ಲಿ ₹5.63 ಇತ್ತು. 2020ಕ್ಕೆ ಇದು ₹5.91ಕ್ಕೆ ಏರಿತ್ತು. 2021ರಲ್ಲಿ₹5.78ರಂತೆ ಎಸ್ಕಾಂಗಳು ವಿದ್ಯುತ್‌ ಖರೀದಿ ಮಾಡಿವೆ. ಕೋವಿಡ್‌ ಅವಧಿಯಲ್ಲಿ ವಿದ್ಯುತ್‌ ಬಳಕೆ ಕಡಿಮೆ ಆಗಿದ್ದರಿಂದ ಖರೀದಿ ದರವೂ ಕಡಿಮೆ ಆಗಿದೆ. ಜೊತೆಗೆ, ವ್ಯತ್ಯಾಸದ ಮೊತ್ತವೂ ಕಡಿಮೆ ಆಗಿರುವುದರಿಂದ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 50 ಪೈಸೆ ಉಳಿತಾಯವಾಗುತ್ತಿದೆ.

ADVERTISEMENT

ಸದ್ಯ, ಪ್ರತಿ ಯುನಿಟ್‌ಗೆ ಸರಾಸರಿ (ವಸತಿ) ₹7.23 ವಿದ್ಯುತ್‌ ದರವಿದೆ. ಇದರಲ್ಲಿ 50 ಪೈಸೆ ಕಡಿಮೆಯಾಗಿರುವುದರಿಂದ ಬಳಕೆದಾರರಿಗೆ ಈಗ ₹6.73ಕ್ಕೆ ಒಂದು ಯುನಿಟ್‌ ವಿದ್ಯುತ್‌ ಸಿಗುತ್ತಿದೆ. ಆದರೆ, ಅಕ್ಟೋಬರ್‌ನಿಂದ ಮತ್ತೆ ಪ್ರತಿ ಯುನಿಟ್‌ಗೆ ₹7.23ರಂತೆಯೇ ದರ ಜಾರಿ ಆಗುವುದರಿಂದ ಬಳಕೆದಾರರ ‘ಜೇಬು’ ಶರವೇಗದಲ್ಲಿ ಬರಿದಾಗುತ್ತಾ ಹೋಗಲಿದೆ !

ಅಲ್ಲದೆ, ಮೊದಲ 30 ಯುನಿಟ್‌ವರೆಗಿನ ಬಳಕೆಯನ್ನು ಒಂದು ಹಂತ ಎಂದು ನಿಗದಿ ಮಾಡಲಾಗಿತ್ತು. ಅಂದರೆ, 0ಯಿಂದ 30 ಯುನಿಟ್‌ವರೆಗೆ, ಪ್ರತಿ ಯುನಿಟ್‌ಗೆ ₹4 ದರ ಇತ್ತು. ಈಗ ಮೊದಲ ಹಂತವನ್ನು 50 ಯುನಿಟ್‌ಗೆ ವಿಸ್ತರಿಸಲಾಗಿದೆ. ಅಂದರೆ, 0ಯಿಂದ 50 ಯುನಿಟ್‌ವರೆಗೆ ವಿದ್ಯುತ್‌ ಬಳಸಿದರೆ ಪ್ರತಿ ಯುನಿಟ್‌ಗೆ ₹4.10 ಇದೆ. ಮೊದಲು, 31 ಯುನಿಟ್‌ನಿಂದ ‘ಸ್ಲ್ಯಾಬ್‌’ ಬದಲಾಗುತ್ತಿದ್ದುದರಿಂದ ದರವೂ ಸರಸರನೇ ಏರುತ್ತಿತ್ತು.

‌70 ಪೈಸೆ ಏರಿಕೆ: ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಎರಡು ಬಾರಿ ವಿದ್ಯುತ್‌ ದರ ಏರಿಕೆ ಮಾಡಲಾಗಿದೆ. 2020ರ ನವೆಂಬರ್‌ 4ರಂದು ಪ್ರತಿ ಯುನಿಟ್‌ಗೆ 40 ಪೈಸೆ, 2021ರ ಜೂನ್‌ 9ರಂದು 30 ಪೈಸೆ ಸೇರಿ ಒಟ್ಟು ಪ್ರತಿ ಯುನಿಟ್‌ಗೆ 70 ಪೈಸೆ ಏರಿಕೆ ಮಾಡಲಾಗಿದೆ.

ವಿದ್ಯುತ್ ಉತ್ಪಾದನಾ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ, ನಾವು ನಿರ್ದಿಷ್ಟ ವಿದ್ಯುತ್‌ ಖರೀದಿಸಲಿ, ಬಿಡಲಿ ನಿಶ್ಚಿತ ಶುಲ್ಕವನ್ನು (ಎಫ್‌ಸಿ) ನಾವು ಪಾವತಿಸಲೇಬೇಕಾಗುತ್ತದೆ. ದರ ಏರಿಕೆಗೂ ಇದೂ ಕಾರಣ ಎನ್ನುವುದು ಎಸ್ಕಾಂಗಳು ಕೊಡುವ ಸಮರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.