ADVERTISEMENT

ಆನೆ- ನಿರೋಧಕ ಉಕ್ಕಿನ ವೈರಿನ ಬೇಲಿ ಅಳವಡಿಸಲು ಮನವಿ

ಅರಣ್ಯ ಸಚಿವ ಅರವಿಂದ ಲಿಂಬಾವಳಿಗೆ ಪತ್ರ ಬರೆದ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 10:23 IST
Last Updated 20 ಮಾರ್ಚ್ 2021, 10:23 IST
ಅರಣ್ಯ ಸಚಿವ ಅರವಿಂದ ಲಿಂಬಾವಳಿ
ಅರಣ್ಯ ಸಚಿವ ಅರವಿಂದ ಲಿಂಬಾವಳಿ   

ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಯಲವನಾಥ ಗ್ರಾಮ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆನೆ ಹಾಗೂ ಮಾನವ ಸಂಘರ್ಷ ತಡೆಯಲು ಒಂದು ಕಿ.ಮೀ ವ್ಯಾಪ್ತಿಯಲ್ಲಿ ‘ಎಲಿಫೆಂಟ್ ಪ್ರೂಫ್ ಸ್ಟೀಲ್ ವೈರ್ ರೋಪ್ ಫೆನ್ಸ್’ ಅಳವಡಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಅರಣ್ಯ ಸಚಿವ ಅರವಿಂದ ಲಿಂಬಾವಳಿಗೆ ಪತ್ರ ಬರೆದಿದ್ದಾರೆ.

ಯಲವನಾಥ ಗ್ರಾಮದ ಗ್ರಾಮಸ್ಥರು ಮಾಡಿಕೊಂಡ ಮನವಿ ಮೇರೆಗೆ ಸೋಮಣ್ಣ ಈ ಪತ್ರ ಬರೆದಿದ್ದಾರೆ.

‘ಯಲವನಾಥ ಗ್ರಾಮ ಬಿಳಿಕಲ್‌ ದಟ್ಟ ಅರಣ್ಯ ಪ್ರದೇಶದಿಂದ ಆವೃತವಾಗಿದೆ. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ರೈತರು ವ್ಯವಸಾಯವನ್ನೇ ಅವಲಂಬಿಸಿದ್ದು, ಭೂಮಿಯ ಫಲವತ್ತತೆಯಿಂದ ಸಮೃದ್ಧವಾಗಿ ಬೆಳೆಯುವ ರಾಗಿ, ಹಿಪ್ಪುನೇರಳೆ ಹಾಗೂ ತರಕಾರಿ ಬೆಳೆಗಳನ್ನು ತಿನ್ನಲು ಹಾಗೂ ಹೇರಳವಾದ ನೀರಿನ ಲಭ್ಯತೆ ಇರುವುದರಿಂದ ಬಾಯಾರಿಕೆ ತಣಿಸಿಕೊಳ್ಳಲು ಅರಣ್ಯ ಪ್ರದೇಶದಿಂದ ಆನೆಗಳು ಹಿಂಡಾಗಿ ಜಮೀನುಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಬೆಳೆ ನಾಶ ಆಗುತ್ತಿದೆ. ಇದು ಮಾನವ-ಆನೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ’ ಎಂದು ಪತ್ರದಲ್ಲಿ ವಸತಿ ಸಚಿವರು ವಿವರಿಸಿದ್ದಾರೆ.

ADVERTISEMENT

ಈ ಸಂಘರ್ಷದಿಂದ ಮಾನವ ಪ್ರಾಣ ಹಾನಿ, ಶಾಶ್ವತ ಹಾಗೂ ಪಾರ್ಶ್ವ ಅಂಗವಿಕಲತೆ, ಬೆಳೆ ಹಾನಿ ಮತ್ತು ಆಸ್ತಿ ಹಾನಿ ಉಂಟಾಗಿ ಸಾರ್ವಜನಿಕರಿಗೆ, ಮುಖ್ಯವಾಗಿ ರೈತರಿಗೆ ಆರ್ಥಿಕವಾಗಿ ಅಪಾರ ನಷ್ಟ ಉಂಟಾಗುತ್ತಿದೆ. ಆನೆ- ಮಾನವ ಸಂಘರ್ಷ ತಡೆಯಲು ಈಗಾಗಲೇ ರಾಜ್ಯದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರತಿ ಕಿ.ಮೀಗೆ ₹1 ಕೋಟಿ ವೆಚ್ಚವಾಗುವುದೆಂದು ಅಂದಾಜು ಮಾಡಲಾಗಿದೆ, ತಮಿಳುನಾಡಿನ ಹೊಸೂರಿನ ಅರಣ್ಯ ಪ್ರದೇಶದ ಗಡಿಯಲ್ಲಿ ‘ಎಲಿಫೆಂಟ್ ಪ್ರೂಫ್ ಸ್ಟೀಲ್ ವೈರ್ ರೋಪ್ ಫೆನ್ಸ್’ ಅಳವಡಿಸಿ ಮಾನವ-ಆನೆ ಸಂಘರ್ಷ ತಡೆಗಟ್ಟುವಲ್ಲಿ ಯಶಸ್ವಿಯಾಗಿರುವುದಾಗಿ ಹಾಗೂ ಈ ರೀತಿಯ ಬೇಲಿ ಅಳವಡಿಕೆಗೆ ಪ್ರತಿ ಕಿ.ಮೀಗೆ ಅಂದಾಜು ₹ 40 ಲಕ್ಷ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಯಲವನಾಥ ಗ್ರಾಮದಲ್ಲಿ ‘ಎಲಿಫೆಂಟ್ ಪ್ರೂಫ್ ಸ್ಟೀಲ್, ವೈರ್ ರೋಪ್ ಫೆನ್ಸ್’ ಅನ್ನು ಪ್ರಾಯೋಗಿಕವಾಗಿ ಅಳವಡಿಸಿ ಅಧ್ಯಯನ ನಡೆಸಲು ಮತ್ತು ಅಧ್ಯಯನದ ಫಲಿತಾಂಶ ಪೂರಕವಾಗಿ ಇದ್ದರೆ ಇಡೀ ರಾಜ್ಯದಲ್ಲಿ ಈ ವ್ಯವಸ್ಥೆ ಅಳವಡಿಸಿಕೊಳ್ಳಬಹುದು ಎಂದೂ ಪತ್ರದಲ್ಲಿ ಸೋಮಣ್ಣ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.