ADVERTISEMENT

‘ಆನೆ ಧಾಮ’ ಕಾಮಗಾರಿ ಶೀಘ್ರ ಆರಂಭ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 16:22 IST
Last Updated 25 ಏಪ್ರಿಲ್ 2025, 16:22 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

– ಫೇಸ್‌ಬುಕ್ ಚಿತ್ರ

ಬೆಂಗಳೂರು: ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಕಾಡಾನೆಗಳ ಹಾವಳಿ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ನಿರ್ಮಾಣ ಮಾಡುತ್ತಿರುವ ‘ಆನೆ ಧಾಮ’ದ ಕಾಮಗಾರಿ ಎರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹53 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸಮಗ್ರ ಯೋಜನಾ ವರದಿ ಸಿದ್ಧವಾಗುತ್ತಿದೆ. ಈಗಾಗಲೇ ಸ್ಥಳ ಪರಿಶೀಲನಾ ಕಾರ್ಯವೂ ಮುಗಿದಿದೆ. ಬಿದಿರು, ಹಲಸು, ಹುಲ್ಲು ಸೇರಿದಂತೆ ಆನೆಗಳ ನೆಚ್ಚಿನ ಆಹಾರವನ್ನು ಆನೆ ಧಾಮದಲ್ಲಿ ಬೆಳೆಸಲಾಗುತ್ತದೆ. ಜನವಸತಿ, ಕೃಷಿ ಭೂಮಿಯತ್ತ ಸಾಗುವ ಆನೆಗಳನ್ನು ಈ ಪ್ರದೇಶದಲ್ಲಿ ಬಿಡಲಾಗುತ್ತದೆ’ ಎಂದರು. 

ಪ್ರತಿ ವರ್ಷ ಸರಾಸರಿ 50-60 ಜನರು ವನ್ಯಜೀವಿ- ಮಾನವ ಸಂಘರ್ಷದಿಂದ ಮೃತಪಡುತ್ತಿದ್ದಾರೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜನರ ಜೀವ ರಕ್ಷಣೆಯಲ್ಲಿ ಆನೆ ಧಾಮ ಪ್ರಮುಖ ಪಾತ್ರ ವಹಿಸಲಿದೆ. ಅರಣ್ಯದಂಚಿನಲ್ಲಿ ಬೆಳೆಸುವ ಬಿದಿರು ಜೈವಿಕ ಮತ್ತು ಸ್ವಾಭಾವಿಕ ಬ್ಯಾರಿಕೇಡ್‌ ಆಗುತ್ತದೆ. ಅರಣ್ಯ ಒತ್ತುವರಿಯನ್ನು ತಡೆಯುತ್ತದೆ. ಆನೆಗಳಿಗೆ ಆಹಾರವೂ ಆಗುತ್ತದೆ. ಇದರಿಂದ ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

6,225 ಎಕರೆ ಅರಣ್ಯ ಒತ್ತುವರಿ ತೆರವು: 

ಕಳೆದ 21 ತಿಂಗಳಲ್ಲಿ 6,225 ಎಕರೆ ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ. 15,422 ಎಕರೆ ಜಮೀನನ್ನು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಚಾರಣ ಪಥಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ  ಎಂದರು. 

ಎಚ್‌ಎಂಟಿ– ಕಾನೂನು ಹೋರಾಟ:

ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ವಶದಲ್ಲಿರುವ ₹14,300 ಕೋಟಿ ಮೌಲ್ಯದ 443 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ತಡೆಯಲಾಗಿದೆ. ಜಮೀನು ಹಿಂಪಡೆಯಲು ಕಾನೂನು ಹೋರಾಟ ಮಾಡಲಾಗುತ್ತಿದೆ. ಮುಂದಿನ ತಿಂಗಳು ಪ್ರಕರಣ ವಿಚಾರಣೆಗೆ ಬರಲಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.