ADVERTISEMENT

ಮುಟ್ಟಾದವರನ್ನು ಹೊರಕೂರಿಸುವ ಪದ್ಧತಿ ನಿವಾರಿಸಿ: ಡಿ.ಸಿ.ಗಳಿಗೆ ಮಹಿಳಾ ಆಯೋಗ ಪತ್ರ

ಕಾಡುಗೊಲ್ಲ ಸಮುದಾಯದಲ್ಲಿ ಈಗಲೂ ಪಾಲನೆ: ಚಿತ್ರದುರ್ಗ, ತುಮಕೂರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 14:45 IST
Last Updated 26 ಡಿಸೆಂಬರ್ 2025, 14:45 IST
ಡಾ. ನಾಗಲಕ್ಷ್ಮೀ ಚೌಧರಿ
ಡಾ. ನಾಗಲಕ್ಷ್ಮೀ ಚೌಧರಿ   

ಬೆಂಗಳೂರು: ಚಿತ್ರದುರ್ಗ ಮತ್ತು ತುಮಕೂರಿನ ಕೆಲವಡೆ ಕಾಡುಗೊಲ್ಲ ಸಮುದಾಯದವರು ಮುಟ್ಟಾದ ಮತ್ತು ಬಾಣಂತಿ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಇರಿಸುತ್ತಿದ್ದು, ಈ ಪದ್ಧತಿಯನ್ನು ನಿವಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ತುಮಕೂರು, ಬೆಂಗಳೂರು ಉತ್ತರ, ಕೋಲಾರ, ಚಿತ್ರದುರ್ಗದ ಕೆಲವು ಕಾಡುಗೊಲ್ಲರಹಟ್ಟಿಗಳಲ್ಲಿ ಈ ಪದ್ಧತಿ ಆಚರಣೆಯಲ್ಲಿ ಇರುವುದರ ಸಂಬಂಧ ಮಹಿಳಾ ಆಯೋಗಕ್ಕೆ ದೂರುಗಳು ಬಂದಿದ್ದವು. ಈ ಬಗ್ಗೆ ಪರಿಶೀಲನೆ ನಡೆಸುವ ಉದ್ದೇಶದಿಂದ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀ ಚೌಧರಿ ಅವರು ಇದೇ ಡಿಸೆಂಬರ್‌ನಲ್ಲಿ ಹಲವು ಕಾಡುಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿದ್ದರು. ತುಮಕೂರಿನ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಬಂಗಾರಹಟ್ಟಿ, ಚಿತ್ರದುರ್ಗದ ಕೆಲವು ಗ್ರಾಮಗಳಲ್ಲಿ ಈ ಪದ್ಧತಿ ಇನ್ನೂ ಚಾಲ್ತಿಯಲ್ಲಿ ಇರುವುದು ಭೇಟಿಯ ವೇಳೆ ಪತ್ತೆಯಾಗಿತ್ತು.  

‘ಈ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದವರು ಇರುವ ಪ್ರದೇಶಗಳಿಗೆ ಈಚೆಗೆ ಭೇಟಿ ನೀಡಿದ್ದೆ. ಕೆಲವೆಡೆ ಈಗಲೂ ಬಾಣಂತಿ ಮತ್ತು ಮುಟ್ಟಾದ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ, ಗುಡಿಸಿಲಿನಲ್ಲಿ ಇರಿಸುತ್ತಾರೆ. ಮೂಢನಂಬಿಕೆಯ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಸ್ಥಳೀಯರು ಹಂಚಿಕೊಂಡರು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಎರಡೂ ಜಿಲ್ಲೆಗಳ ಹಲವು ಗೊಲ್ಲರಹಟ್ಟಿಗಳಲ್ಲಿ ಇದ್ದ ಇಂತಹ ಪದ್ಧತಿಯನ್ನು ಜಾಗೃತಿ ಕಾರ್ಯಕ್ರಮಗಳ ಮೂಲಕ ನಿವಾರಿಸಲಾಗಿದೆ. ಆದರೆ, ಕೆಲವು ಗೊಲ್ಲರಹಟ್ಟಿಗಳಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ. ಅಂತಹ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ, ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ’ ಎಂದು ಪತ್ರದಲ್ಲಿ ಕೋರಿದ್ದಾರೆ.

‘ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಲಭ್ಯವಿರುವ ಸವಲತ್ತುಗಳ ಬಗ್ಗೆ ಈ ಹೆಣ್ಣುಮಕ್ಕಳಿಗೆ ಮಾಹಿತಿ ನೀಡಿ, ಅವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕಿದೆ. ಈ ಮೂಲಕ, ಇಂತಹ ಅನಾಗರಿಕ ಪದ್ಧತಿಗಳಿಂದ ಅವರನ್ನು ಹೊರತರಲು ಸಾಧ್ಯವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.