ADVERTISEMENT

ಅಜಾತಶತ್ರು, ಜನನಾಯಕ ಧರ್ಮಸಿಂಗ್‌ ಜಯಂತಿ ಇಂದು

ಜೇವರ್ಗಿಯ ‘ಸೋಲಿಲ್ಲದ ಸರದಾರ’ ಧರ್ಮಸಿಂಗ್‌ ಜಯಂತಿ ಇಂದು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 23:30 IST
Last Updated 24 ಡಿಸೆಂಬರ್ 2025, 23:30 IST
<div class="paragraphs"><p>ಎನ್‌.ಧರ್ಮಸಿಂಗ್‌</p></div>

ಎನ್‌.ಧರ್ಮಸಿಂಗ್‌

   

ಜೇವರ್ಗಿ : ಧರ್ಮ, ಜಾತಿ, ಮತ, ಪಂಗಡಗಳನ್ನು ಮೀರಿ ಸರ್ವಜನಾಂಗದ ನಾಯಕರಾಗಿ ಮೆರೆದವರು ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರ್ಮಸಿಂಗ್‍. ಈ ನಾಡಿಗಾಗಿ ಶಕ್ತಿ ಮೀರಿ ದುಡಿದಿರುವ ಧರ್ಮಸಿಂಗ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಸ್ನೇಹ ಭಾರತದ ರಾಜಕಾರಣದಲ್ಲಿಯೇ ಜಗಜ್ಜಾಹೀರಾಗಿದೆ.

ರಾಜಕೀಯ ವಲಯದಲ್ಲಿ ಪಾರದರ್ಶಕ ಹಾಗೂ ಆತ್ಮೀಯತೆಯನ್ನು ಮೆರೆದಂತಹ ಜನನಾಯಕ ಎಂಬ ಕೀರ್ತಿಗೆ ಧರ್ಮಸಿಂಗ್ ಪಾತ್ರರಾಗಿದ್ದಾರೆ. ಪದಗಳಿಗೆ ನಿಲುಕದ ಉದಾತ್ತ ವ್ಯಕ್ತಿತ್ವ ಅವರದ್ದು. ಸಾರ್ವಜನಿಕರನ್ನು ಸನಿಹ ಕರೆದು ಅಪ್ಪಿಕೊಳ್ಳುವ ಆದರ್ಶಮಯ–ಕರುಣಾಮಯಿ ಹೃದಯವುಳ್ಳವರಾಗಿದ್ದರು.

ADVERTISEMENT

ಧರ್ಮಸಿಂಗ್‌ ಅವರು ಹುಟ್ಟಿದ್ದು 1936 ಡಿಸೆಂಬರ್ 25ರಂದು. ಅವರ ಹುಟ್ಟೂರು ಜೇವರ್ಗಿಯ ನೆಲೋಗಿ ಗ್ರಾಮ. ಆಂಧ್ರ ಪ್ರದೇಶದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಧರ್ಮಸಿಂಗ್ ಎಂ.ಎ ಮತ್ತು ಎಲ್.ಎಲ್.ಬಿ ಪದವಿ ವ್ಯಾಸಂಗ ಮಾಡಿದ್ದರು. 1960ರಲ್ಲಿ ಕಲಬುರಗಿ ನಗರಸಭಾ ಸದಸ್ಯರಾದ ಅವರು ಅದೇ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

1972ರಲ್ಲಿ ವಿಧಾನಸಭಾ ಚುನಾವಣೆಗೆ ಜೇವರ್ಗಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆ ಇವರ ಎದುರಾಳಿ. ರಾಂಪುರೆ ಹೈದರಾಬಾದ್‌ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ. ಅವರನ್ನು ಜನ ‘ಹೈ.ಕ. ಹುಲಿ’ ಎಂದೇ ಕರೆಯುತ್ತಿದ್ದರು. ಹೀಗಿದ್ದರೂ ಚುನಾವಣೆಯಲ್ಲಿ ಧರ್ಮಸಿಂಗ್‌ ಗೆಲುವು ಸಾಧಿಸಿದ್ದು ವಿಶೇಷವಾಗಿತ್ತು.

ಜೇವರ್ಗಿ ವಿಧಾನಸಭೆ ಕ್ಷೇತ್ರದಿಂದ ಸತತವಾಗಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಅಪರೂಪದ ಸಾಧನೆ ಧರ್ಮಸಿಂಗ್ ಅವರದ್ದು. ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು, ಗೃಹ, ಲೋಕೋಪಯೋಗಿ, ಅಬಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಧರ್ಮಸಿಂಗ್‌ ಕಾರ್ಯ ನಿರ್ವಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿಯೂ ಅವರು ಕಾಂಗ್ರೆಸ್‌ ಪಕ್ಷವನ್ನು ಕಟ್ಟಿದ್ದಾರೆ. ಜೇವರ್ಗಿ ಕ್ಷೇತ್ರದ ಜನ ಎಂಟು ಬಾರಿ ವಿಧಾನಸಭೆಗೆ ಸತತವಾಗಿ ಗೆಲ್ಲಿಸಿ, ಧರ್ಮಸಿಂಗ್‌ ಅವರಿಗೆ ‘ಸೋಲಿಲ್ಲದ ಸರದಾರ’ ಎಂಬ ಕಿರೀಟ ತೊಡಿಸಿದ್ದರು.

2004ರಿಂದ 2006ರವರೆಗೆ ಕರ್ನಾಟಕದಲ್ಲಿ ರಚನೆಯಾಗಿದ್ದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಅವರು ಅಧಿಕಾರ ಕಳೆದುಕೊಳ್ಳುವಂತಾಯಿತು. 2006–2007ರ ಸಂದರ್ಭದಲ್ಲಿ ಧರ್ಮಸಿಂಗ್ ವಿರೋಧ ಪಕ್ಷದ ನಾಯಕರಾದರು. 2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರಕ್ಕೆ ವಲಸೆ ಹೋಗಿ ಸಂಸದರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಮರುಜೀವ ಪಡೆದಿದ್ದರು. 

‘ಜಾತಿ, ಧರ್ಮ ಮೀರಿ ಬೆಳೆದ ನಾಯಕ’

ಧರ್ಮಸಿಂಗ್‌ ಅವರು 1980ರಲ್ಲಿ ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ತಮ್ಮ ನಾಯಕಿ ಇಂದಿರಾ ಗಾಂಧಿ ಅವರ ಸೂಚನೆಯ ಮೇರೆಗೆ
ರಾಜೀನಾಮೆ ನೀಡಿ, ಕೇರಳದ ಸಿ.ಎಂ. ಸ್ಟೀಫನ್‌ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಧರ್ಮಸಿಂಗ್‌ 13 ಚುನಾವಣೆಗಳನ್ನು ಎದುರಿಸಿದ್ದಾರೆ. ಅವುಗಳಲ್ಲಿ ಒಂದು ಬಾರಿ ಕಲಬುರಗಿ ನಗರಸಭೆಯ ಸದಸ್ಯ, ಎಂಟು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿರುವುದು ವಿಶೇಷವಾಗಿದೆ.

ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಧರ್ಮಸಿಂಗ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಹೊಂದಿದ್ದ ಸ್ನೇಹ ಮತ್ತು ಒಡನಾಟ ಕೇವಲ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ; ರಾಷ್ಟ್ರ ರಾಜಕಾರಣದಲ್ಲೂ ಗಮನ ಸೆಳೆದಿತ್ತು. ಕಾಂಗ್ರೆಸ್
ಪಕ್ಷದ ಕಾರ್ಯಕರ್ತರಿಂದ ಹಿಡಿದು ಅಧಿನಾಯಕರವರೆಗೆ ಎಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ
ಪಾತ್ರರಾಗಿದ್ದ ಧರ್ಮಸಿಂಗ್‌ ಅವರನ್ನು ಪ್ರತಿಪಕ್ಷಗಳ ಎಲ್ಲಾ ನಾಯಕರೂ ಗೌರವಿಸುವ ಹಾಗೂ ಮೆಚ್ಚುವ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದು ಗುರುತಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.