ADVERTISEMENT

ನನ್ನ ಸಲಹೆಗಳನ್ನು ಅಧ್ಯಯನ ಮಾಡಿ: ಸಚಿವ ಸುನಿಲ್‌ ಕುಮಾರ್‌ಗೆ ಸಿದ್ದರಾಮಯ್ಯ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಸೆಪ್ಟೆಂಬರ್ 2022, 11:26 IST
Last Updated 7 ಸೆಪ್ಟೆಂಬರ್ 2022, 11:26 IST
ಸುನಿಲ್‌ ಕುಮಾರ್‌ ಮತ್ತು ಸಿದ್ದರಾಮಯ್ಯ
ಸುನಿಲ್‌ ಕುಮಾರ್‌ ಮತ್ತು ಸಿದ್ದರಾಮಯ್ಯ    

ಬೆಂಗಳೂರು: ಇಂಧನ ಇಲಾಖೆಯನ್ನು ಲಾಭದಾಯಕವಾಗಿ ಮಾಡುವ ಯೋಚನೆ ನಿಮಗಿದ್ದರೆ ನಾನು ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ನೀಡಿದ್ದ ಸಲಹೆಗಳನ್ನು ಅಧ್ಯಯನ ಮಾಡಿ, ಜಾರಿಗೆ ತರುವ ಧೈರ್ಯ ಮಾಡಿ ಎಂದು ಸಚಿವ ಸುನಿಲ್‌ ಕುಮಾರ್‌ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿತ್ತು ಎಂಬ ಸಚಿವ ಸುನೀಲ್ ಕುಮಾರ್‌ ಆರೋಪಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಸುನಿಲ್‌ ಕುಮಾರ್‌ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹೊಸ ವಿದ್ಯುತ್ ಕಾಯ್ದೆಯನ್ನು ಒಮ್ಮೆ ಓದಿಕೊಳ್ಳುವುದು ಒಳಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಕರ್ಫ್ಯೂ ಇದ್ದ ಕಾಲದಲ್ಲಿಯೇ ಕರಡನ್ನು ಸಿದ್ಧಪಡಿಸಿ, ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಿರುವ ಹೊಸ ವಿದ್ಯುತ್ ಬಿಲ್‌ನಲ್ಲಿಯೇ ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವ ನಿರ್ಧಾರ ಇದೆ. ನಮ್ಮ ಸರ್ಕಾರ ಇಂತಹ ಪ್ರಸ್ತಾಪವನ್ನು ಮಾಡಿದ್ದರೆ ಸುನಿಲ್‌ ಕುಮಾರ್‌ ಅದನ್ನು ಬಹಿರಂಗಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ADVERTISEMENT

ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ಸುನಿಲ್‌ ಕುಮಾರ್‌ ಮತ್ತು ಅವರ ಸರ್ಕಾರ ವಿರೋಧಿಸುವುದಾಗಿದ್ದರೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಹೊಸ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಿ, ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸೋಣ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಚಿವ ಸುನಿಲ್‌ ಕುಮಾರ್‌ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಸಾಲದ ಸುಳ್ಳು ಆರೋಪ ಹೊರಿಸಿದ್ದಾರೆ. 2014-15ರಲ್ಲಿ ವಿದ್ಯುತ್ ಉತ್ಪಾದನೆ 14,825 ಮೆಗಾ ವ್ಯಾಟ್ ಮಾತ್ರ. 2018ನೇ ಸಾಲಿನ ವಿದ್ಯುತ್ ಉತ್ಪಾದನೆ 28,741 ಮೆಗಾ ವ್ಯಾಟ್. ಹೆಚ್ಚು ಉತ್ಪಾದನೆ ಎಂದರೆ ಹೆಚ್ಚು ಲಾಭವಲ್ಲವೇ? ನಷ್ಟ ಎಲ್ಲಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

2014-15ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ 118 ಮೆಗಾ ವ್ಯಾಟ್, ಪವನ ವಿದ್ಯುತ್ 2655 ಮೆಗಾ ವ್ಯಾಟ್‌ ಆಗಿತ್ತು. 2018ರಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ 6,157 ಮೆಗಾ ವ್ಯಾಟ್ ಮತ್ತು ಪವನ ವಿದ್ಯುತ್ 4,730 ಮೆಗಾ ವ್ಯಾಟ್ ಆಗಿತ್ತು. ಸುನಿಲ್‌ ಕುಮಾರ್‌ ಅವರೇ, ಇಲ್ಲಿಯೂ ಹೆಚ್ಚು ವಿದ್ಯುತ್ ಉತ್ಪಾದನೆ, ಹೆಚ್ಚು ಲಾಭ. ಮತ್ತೆ ನಷ್ಟ ಎಲ್ಲಿದೆ ಎಂದು ಸಿದ್ದರಾಮಯ್ಯ ಕುಟುಗಿದ್ದಾರೆ.

ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11ರಿಂದ 13,000 ಮೆಗಾ ವ್ಯಾಟ್. ಮಳೆಗಾಲದಲ್ಲಿ 8ರಿಂದ 9,000 ಮೆಗಾ ವ್ಯಾಟ್. ಸುನಿಲ್‌ ಕುಮಾರ್‌ ಅವರೇ, ಉಳಿಕೆಯಾಗುವ 18ರಿಂದ 20 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಮಾರಾಟಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಅವಾಸ್ತವಿಕ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದದಿಂದಾಗಿ ರಾಜ್ಯಕ್ಕೆ ₹2000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿರುವ ಸಚಿವ ಸುನಿಲ್‌ ಕುಮಾರ್‌ ಅವರೇ, ನಿಮ್ಮ ಪಕ್ಷ ಅಧಿಕಾರದಲ್ಲಿರುವ ಗುಜರಾತ್ ರಾಜ್ಯವು ವಿದ್ಯುತ್ ಖರೀದಿಗೆ ಯಾವ ದರ ನಿಗದಿಪಡಿಸಿದೆ ಎನ್ನುವುದನ್ನೂ ತಿಳಿಸಿ ಬಿಡಿ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಗುಜರಾತ್ ರಾಜ್ಯವೂ ಸೇರಿದಂತೆ ದೇಶದಲ್ಲಿ ಯಾವ, ಯಾವ ರಾಜ್ಯಗಳು 2010ರಿಂದ 2022 ರವರೆಗೆ ಎಷ್ಟು ರೂಪಾಯಿಗಳಿಗೆ ಸೋಲಾರ್ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ ಎಂಬುದರ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕೆಂದು ಸುನಿಲ್‌ ಕುಮಾರ್‌ ಅವರನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪೊಳ್ಳುವಾದದ ಮೂಲಕ ವೈಫಲ್ಯವನ್ನು ಬಚ್ಚಿಟ್ಟುಕೊಳ್ಳಲು ಹೋಗದೆ, ಸಂಪನ್ಮೂಲ ಸೋರಿಕೆಗೆ ತಡೆ, ಹೆಚ್ಚುವರಿ ವಿದ್ಯುತ್ ಮಾರಾಟ, ಅಗತ್ಯವಿಲ್ಲದಿದ್ದರೂ ಅದಾನಿ ಪವರ್ಸ್ ಸೇರಿದಂತೆ ಖಾಸಗಿಯವರಿಂದ ವಿದ್ಯುತ್ ಖರೀದಿಸುವ ಒಪ್ಪಂದದ ರದ್ದತಿಯೂ ಸೇರಿದಂತೆ ನನ್ನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಎಂದು ಸುನಿಲ್‌ ಕುಮಾರ್‌ ವಿರುದ್ಧ ಸಿದ್ದರಾಮಯ್ಯ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.