ಬೆಂಗಳೂರು: ‘ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ಝೋನ್ ಅನ್ನು ಕಡಿಮೆ ಮಾಡುವ ಪ್ರಸ್ತಾವವನ್ನು ಸರ್ಕಾರ ಕೈಬಿಡದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ’ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಎಚ್ಚರಿಸಿದ್ದಾರೆ.
‘ಕೆರೆಗಳು ಹಾಗೂ ರಾಜಕಾಲುವೆಗಳ ಸಂರಕ್ಷಿತ ಪ್ರದೇಶವನ್ನು ಕಡಿಮೆ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಪರಿಸರಕ್ಕೆ ಅತ್ಯಂತ ಮಾರಕ. ರಿಯಲ್ ಎಸ್ಟೇಟ್ ಮಾಫಿಯಾಗೆ ಮಣೆ ಹಾಕಲು ನಮ್ಮ ಪ್ರಾಕೃತಿಕ ಸಂಪತ್ತನ್ನೇ ನಾಶ ಮಾಡುವ ಹುನ್ನಾರವಾಗಿದೆ’ ಎಂದು ಅವರು ದೂರಿದ್ದಾರೆ.
‘ಅಭಿವೃದ್ಧಿ ಚಟುವಟಿಕೆಗಳ ಜತೆಗೆ ನೈಸರ್ಗಿಕ ಸಂಪತ್ತು ಉಳಿಸಬೇಕೆಂಬ ಕಾಳಜಿಯುಳ್ಳ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಡೆದಿರುವ ಸಭೆಯೇ ಇಂತಹ ನಿರ್ಧಾರ ಕೈಗೊಂಡಿದೆ ಎಂದರೆ, ಸಭೆಯ ತೀರ್ಮಾನದ ಹಿಂದಿನ ರಾಜಕೀಯ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು’ ಎಂದಿದ್ದಾರೆ.
‘ಬೆಂಗಳೂರಿನಲ್ಲಿರುವ ಒಂದು ಕೆರೆಯ ನೀರನ್ನೂ ಕುಡಿಯುವ ಪರಿಸ್ಥಿತಿಯಿಲ್ಲ. ಕೆರೆ ನೀರಿಗಿರುವ ಯೋಗ್ಯತೆಯನ್ನು ಭೂ ಮಾಫಿಯಾದವರು, ರಿಯಲ್ ಎಸ್ಟೇಟ್ ಕುಳಗಳು ಕಳೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂರಕ್ಷಿತ ಪ್ರದೇಶವನ್ನೂ ಕಡಿತಗೊಳಿಸಿದರೆ, ತ್ಯಾಜ್ಯ ನೇರವಾಗಿ ಕೆರೆಗೇ ಹರಿಯುತ್ತದೆ. ಪರಿಸರಕ್ಕೆ ಮಾರಕವಾಗುವ ಬಫರ್ ಝೋನ್ ಕಡಿಮೆ ಮಾಡುವುದನ್ನು ಸರ್ಕಾರಕ್ಕೆ ಸಲಹೆ ನೀಡಿರುವವರಿಗೆ, ಹಲವು ದಶಕಗಳಿಂದ ರಾಜಕಾರಣಿಯಾಗಿ ಪ್ರಪಂಚವನ್ನು ಕಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಣೆ ಹಾಕಬಾರದು’ ಎಂದು ಆಗ್ರಹಿಸಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು’ ಮಾಡಲು ಹೊರಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಎಲ್ಲವನ್ನೂ ಯೋಜನೆಗಳಿಂದಲೇ ಅಳೆಯಬಾರದು. ಪರಿಸರವನ್ನು ಹಾಳು ಮಾಡುವ ಮಾಫಿಯಾಗೆ ಮಣಿಯಬಾರದು. ಜಲಮೂಲಗಳಾದ ಕೆರೆಗಳಿಗೆ ಕಿಂಚಿತ್ತೂ ಅಡಚಣೆಯಾಗದಂತೆ ನೋಡಿಕೊಳ್ಳಬೇಕು’ ಎಂದು ರಾಮಸ್ವಾಮಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.