ADVERTISEMENT

‘ಎಸ್ಕಾಂ’ಗಳ ಸಾಲದ ಹೊರೆ ₹29 ಸಾವಿರ ಕೋಟಿ: ಬೊಮ್ಮಾಯಿ ಅವರಿಗೆ ಮೊರೆ

ಸಂಕಷ್ಟದಿಂದ ಪಾರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೊರೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 20:41 IST
Last Updated 28 ಜೂನ್ 2022, 20:41 IST
   

ಬೆಂಗಳೂರು: ರಾಜ್ಯದ ಐದು ‘ಎಸ್ಕಾಂ’ಗಳು ಅತ್ಯಂತ ಸಂಕಷ್ಟದಲ್ಲಿ ನಡೆಯುತ್ತಿದ್ದು, 2022ರ ಮಾರ್ಚ್‌ ಕೊನೆಗೆ ಎಸ್ಕಾಂಗಳ ಒಟ್ಟು ಸಾಲದ ಹೊರೆ ₹29,764 ಕೋಟಿಗಳಿಗೆ ಏರಿದೆ.

ಎಸ್ಕಾಂಗಳಿಗೆ ಕಾಯಕಲ್ಪ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯುತ್‌ ವಲ ಯದಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಬಹುದು ಎಂಬ ವಿಷಯವನ್ನು ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದಿ ದ್ದಾರೆ.ನಿವೃತ್ತ ಐಎಎಸ್‌ ಅಧಿಕಾರಿ ಜಿ. ಗುರುಚರಣ್ ಸಮಿತಿ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ವರದಿಯಲ್ಲಿ ಈ ಅಂಕಿ–ಅಂಶಗಳನ್ನು ನೀಡಲಾಗಿದೆ.

ಎಲ್ಲ ಎಸ್ಕಾಂಗಳ ಈವರೆಗಿನ ಒಟ್ಟು ನಷ್ಟದ ಪ್ರಮಾಣ 2020–21 ನೇ ವಾರ್ಷಿಕ ಅಂತ್ಯಕ್ಕೆ ₹9,821 ಕೋಟಿ ಗೇರಿದೆ. ಇದರಲ್ಲಿ 2020–21 ನೇ ಸಾಲಿನಲ್ಲಿ ಆಗಿರುವ ನಷ್ಟ ₹4,236 ಕೋಟಿಗಳಾಗಿವೆ. ವಿದ್ಯುತ್‌ ಖರೀದಿಯ ಬಾಕಿ ₹16,400 ಕೋಟಿಗಳಾಗಿದ್ದು, ಇದರಲ್ಲಿ ಕೆಪಿಸಿಎಲ್‌/ ಆರ್‌ಸಿಪಿಎಲ್‌ಗೆ ₹11,391 ಕೋಟಿ ಬಾಕಿ ಉಳಿಸಿಕೊಳ್ಳ ಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ವಿದ್ಯುತ್‌ ಪೂರೈಕೆಯ ಸರಾಸರಿ ವೆಚ್ಚಕ್ಕೂ ಗ್ರಾಹಕರ ಮೇಲೆ ವಿಧಿಸುವ ದರಕ್ಕೂ ಇರುವ ವ್ಯತ್ಯಾಸ ಪ್ರತಿ ಯುನಿಟ್‌ಗೆ 63 ಪೈಸೆಗಳಿವೆ. ಇಷ್ಟೆಲ್ಲ ಹಿನ್ನಡೆಯ ಮಧ್ಯೆಯೂ ರಾಜ್ಯದಲ್ಲಿ ವಿದ್ಯುತ್‌ ವಲಯದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಈಗಿನ ಸ್ಥಿತಿ ಯಿಂದ ಮೇಲೆದ್ದು, ಸುಸ್ಥಿರ ಮತ್ತು ದಕ್ಷತೆ ಹಂತವನ್ನು ತಲುಪಲು ಸಾಧ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳನ್ನೂ ಅಧಿಕಾರಿಗಳು ಗುರುತಿಸಿದ್ದಾರೆ. ಅವು ಗಳೆಂದರೆ, ಮುಖ್ಯವಾಗಿ ಎಚ್‌ಟಿ ಬಳಕೆದಾರರಿಗೆ ಅಧಿಕ ದರ ನಿಗದಿ ಮಾಡಲಾಗಿದ್ದು, ಇದರಿಂದ ಈ ವರ್ಗ ಇಕ್ಕಟ್ಟಿಗೆ ಸಿಲುಕಿದೆ. ವಿದ್ಯುತ್ ಖರೀದಿ ದರ ಅತ್ಯಧಿಕವಾಗಿದೆ. ಈ ವಲಯದ ಹಣಕಾಸು ವ್ಯವಸ್ಥೆಯೂ ಋಣಾತ್ಮಕವಾಗಿದೆ. ಕಾರ್ಯಾಚರಣೆಯಲ್ಲಿ ಅದಕ್ಷತೆ, ವಿವಿಧ ಸಬ್ಸಿಡಿಯಡಿ ಉಚಿತ ವಿದ್ಯುತ್‌ ಪೂರೈಕೆ, ಮೀಟರ್‌ ಅಳವಡಿಸದೇ ಇರುವುದು ಮತ್ತು ಬಿಲ್‌ ನೀಡದೇ ಇರುವುದು (ಶೇ 45), ಅಸ ಮಾನತೆಯಿಂದ ಕೂಡಿದ ವಿದ್ಯುತ್‌ ದರ ರಚನೆ.

30ಲಕ್ಷ ಐಪಿ ಸೆಟ್‌ಗಳಿಗೆ ಮೀಟರ್‌ ಇಲ್ಲ: ರಾಜ್ಯದಲ್ಲಿ 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಸುಮಾರು 30 ಲಕ್ಷ ಕೃಷಿ ಪಂಪ್‌ ಸೆಟ್‌ಗಳಿಗೆ ಮೀಟರ್‌ ಅಳವಡಿಸಿಲ್ಲ, ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕೆ ಹಣ ಹೊಂದಿಸುವುದೇ ಸರ್ಕಾರಕ್ಕೆ ಕಷ್ಟವಾಗಿದ್ದು, ಇದರಿಂದ ಹೊರ ಬರಲು ಎಲ್ಲ ಐಪಿ ಸೆಟ್‌ಗಳಿಗೆ ಮೀಟರ್‌ ಅಳವಡಿಸಬೇಕು ಎಂಬ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ. ಅನಧಿಕೃತ ಐಪಿ ಸೆಟ್‌ ಅಳವಡಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ವಿವರಿಸಿದ್ದಾರೆ.

–––

ವಿದ್ಯುತ್‌ ಖರೀದಿಗೆ ₹39 ಸಾವಿರ ಕೋಟಿ

2022–23 ನೇ ಸಾಲಿಗೆ 71,646 ಮಿಲಿಯನ್‌ ಯುನಿಟ್‌ಗಳ ಖರೀದಿಗೆ ₹39,233 ಕೋಟಿ ಬೇಕಾಗುತ್ತದೆ. ಪ್ರತಿ ಯುನಿಟ್‌ನ ಸರಾಸರಿ ವೆಚ್ಚ ₹5.48. ಇದರಲ್ಲಿ 12 ಮೂಲಗಳಿಂದ 18,073 ಮಿಲಿಯನ್‌ ಯುನಿಟ್‌ಗಳ ಖರೀದಿಯೂ ಸೇರಿದೆ. ಇದು ಒಟ್ಟು ಖರೀದಿಯ ಶೇ 25 ರಷ್ಟು ಆಗುತ್ತದೆ. ಇದರ ಸರಾಸರಿ ವೆಚ್ಚ ಯುನಿಟ್‌ಗೆ ₹7.38 ಆಗುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ವಿವರಿಸಿದ್ದಾರೆ.

ತಪ್ಪು ಸಂದೇಶ

ವಿದ್ಯುತ್‌ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ದರ ಆಧಾರಿತ ಹೊಂದಾಣಿಕೆ ವೆಚ್ಚದಲ್ಲಿ ಮಾತ್ರ ವ್ಯತ್ಯಾಸವಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್‌ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ, ರಾಜ್ಯ ಸರ್ಕಾರದ ಮುಂದೆ ಆ ರೀತಿಯ ಯಾವುದೇ ಪ್ರಸ್ತಾವವಿಲ್ಲ. ವಿದ್ಯುತ್‌ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವುದು ವಾಡಿಕೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 13 ಉಷ್ಣ ವಿದ್ಯುತ್‌ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ. ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ಎಲ್ಲ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಇಂಧನ ಹೊಂದಾಣಿಕೆ ವೆಚ್ಚವನ್ನು ಪರಿಷ್ಕರಿಸಿದೆ ಎಂದು ತಿಳಿಸಿದ್ದಾರೆ.

ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್‌ಸಿ ವಿವೇಚನಾಧಿಕಾರವಾಗಿದ್ದು, ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

‘ಚುನಾವಣೆಗಾಗಿ ದರ ಏರಿಸಿ, ಇಳಿಸುವ ಆಟ’

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಸರ್ಕಾರವು ವಿದ್ಯುತ್‌ ದರವನ್ನು ಏರಿಸಿ, ಇಳಿಸುವ ಆಟಕ್ಕೆ ಕೈಹಾಕಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿದ್ಯುತ್‌ ದರ ಪರಿಷ್ಕರಣೆ ಸಂಬಂಧ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೋಮ‌ವಾರ ಆದೇಶ ಹೊರಡಿಸಿರುವ ಕುರಿತು ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಈಗ ವಿದ್ಯುತ್‌ ದರ ಏರಿಸಿ, ಇನ್ನೇನು ಚುನಾವಣೆ ಸಮೀಪದಲ್ಲಿದೆ ಎನ್ನುವಾಗ ಇಳಿಸುವ ನಾಟಕ ಈ ಆದೇಶದ ಹಿಂದಿದೆ’ ಎಂದು ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ದರ ಏರಿಕೆ ಏಕೆ? ಇದರ ಹಿಂದಿರುವ ಹುನ್ನಾರ ಏನು? ತಿಂಗಳಿಗೆ 100 ಯೂನಿಟ್‌ ವಿದ್ಯುತ್‌ ಬಳಸುವ ಗ್ರಾಹಕರೇ ಹೆಚ್ಚು ಬೆಲೆ ತೆರಬೇಕಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್‌ ಬಳಸದೆ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇನಾ’ ಎಂದು ಪ್ರಶ್ನಿಸಿದ್ದಾರೆ.

‘ವಿದ್ಯುತ್ ದರ ಏರಿಕೆ ನಿರ್ಧಾರ ಕೈಬಿಡಿ’

ಬೆಂಗಳೂರು: ‘ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ವಿದ್ಯುತ್ ದರವನ್ನೂ ಹೆಚ್ಚಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಚೇತರಿಸಿಕೊಳ್ಳಲಾಗದಂಥ ಹೊಡೆತ ನೀಡಲು ಹೊರಟಿದೆ. ಇದು ಆಡಳಿತದ ವೈಫಲ್ಯಕ್ಕೆ ರಾಜ್ಯದ ಜನತೆ ತೆರಬೇಕಾಗಿರುವ ಬೆಲೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಟ್ವೀಟ್‌ ಮಾಡಿರುವ ಅವರು, ‘ಒಂದೆಡೆ ನಿರುದ್ಯೋಗದಿಂದಾಗಿ ಪ್ರತಿಯೊಂದು ಕುಟುಂಬದ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ, ವಿದ್ಯುತ್ ದರ ಏರಿಕೆ ನಿರ್ಧಾರ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.