ADVERTISEMENT

ಗಾಂಧಿ ಹೆಸರಿನ ಉದ್ಯೋಗ ಖಾತ್ರಿ ಪುನರ್‌ ಸ್ಥಾಪನೆಗೆ ವಿಶೇಷ ಅಧಿವೇಶನ: ಸಚಿವ ಖಂಡ್ರೆ

ಕೇಂದ್ರದ ಬಿಜೆಪಿ ಸರ್ಕಾರಕ್ಕೆ ವಿಪರೀತ ಬುದ್ಧಿ ವಿನಾಶ ಕಾಲೇ: ಸಚಿವ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 13:40 IST
Last Updated 11 ಜನವರಿ 2026, 13:40 IST
   

ಬೀದರ್‌: ‘ವಿಬಿ ಜಿ ರಾಮ್‌ ಜಿ’ ಹಿಂಪಡೆದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಪುನರ್‌ ಸ್ಥಾಪನೆಗೆ ಒತ್ತಾಯಿಸಿ ಎರಡು ದಿನಗಳ ವಿಶೇಷ ಅಧಿವೇಶನ ಕರೆದು, ನಿರ್ಣಯ ಅಂಗೀಕರಿಸಲಾಗುವುದು’ ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಹೊಸ ಕಾಯ್ದೆ ಸಂಪೂರ್ಣವಾಗಿ ರದ್ದುಗೊಳಿಸಿ ಹಿಂದಿನ ಕಾಯ್ದೆ ಮರುಸ್ಥಾಪಿಸಬೇಕು. ಜನರ ಹಕ್ಕು ಪುನರ್‌ ಸ್ಥಾಪಿಸಬೇಕು. ಕಾಂಗ್ರೆಸ್‌ ಪಕ್ಷದ ವತಿಯಿಂದ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ‘ಎಮ್‌ಜಿನರೇಗಾ ಬಚಾವೋ’ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹೊಸ ಕಾಯ್ದೆ ಮೂಲಕ ಕೇಂದ್ರದ ಬಿಜೆಪಿಯು ಬಡ ಕೂಲಿ ಕಾರ್ಮಿಕರು, ಮಹಿಳೆಯರು, ಶೋಷಿತರಿಂದ ಉದ್ಯೋಗದ ಹಕ್ಕು ಕಸಿದುಕೊಂಡು ಅವರಿಗೆ ಸಂಚಕಾರ ತಂದಿದೆ. ಕಾಯ್ದೆಯಡಿ ಬಡವರಿಗೆ ವರ್ಷಕ್ಕೆ ನೂರು ದಿನಗಳ ಉದ್ಯೋಗ ಕೊಡಲಾಗುತ್ತಿತ್ತು. ಈಗ ಅದರಲ್ಲಿ ಬದಲಾವಣೆ ತರಲಾಗಿದೆ. ಗ್ರಾಮ ಪಂಚಾಯಿತಿಗಳ ಹಕ್ಕು ಮೊಟಕುಗೊಳಿಸಲಾಗಿದೆ. ಕೇಂದ್ರ ನೋಟಿಫಿಕೇಶನ್‌ ಮಾಡಿದ ಸ್ಥಳದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇದು ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ವಿರುದ್ಧವಾದ ನಡೆ ಎಂದು ಟೀಕಿಸಿದರು.

ಸೋನಿಯಾ ಗಾಂಧಿ ಹಾಗೂ ಮನಮೋಹನ್‌ ಸಿಂಗ್‌ ಅವರ ದೂರದೃಷ್ಟಿತ್ವದ ಪರಿಣಾಮ ದೇಶದಾದ್ಯಂತ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿತ್ತು. ಇದು ಸ್ಥಳೀಯವಾಗಿ ಸಂಪನ್ಮೂಲ ಸೃಷ್ಟಿಸಿ, ದುಡಿಯುವ ಕೈಗಳಿಗೆ ಉದ್ಯೋಗ ಕೊಡುತ್ತಿತ್ತು. ಕೋವಿಡ್‌ ಹಾಗೂ ಬರಗಾಲದ ಸಂದರ್ಭದಲ್ಲಿ ಖಾತ್ರಿ ಜನರಿಗೆ ನೆರವಾಗಿತ್ತು. ಹೀಗಿರುವಾಗ ಅದನ್ನು ಬದಲಿಸಿ ಎಲ್ಲ ತೀರ್ಮಾನ ದೆಹಲಿಯಲ್ಲಿ ಕೈಗೊಳ್ಳುವಂತಹ ಕಾನೂನು ತರಲಾಗಿದೆ. ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನ ಭರಿಸಿದರೆ, ರಾಜ್ಯ ಸರ್ಕಾರ ಶೇ 40ರಷ್ಟು ಭರಿಸಬೇಕು. ಇದು ರಾಜ್ಯಗಳ ಮೇಲೆ ಹಾಕಿರುವ ಹೆಚ್ಚಿರುವ ಹೊರೆ. ಇದು ಸರ್ವಾಧಿಕಾರ ಧೋರಣೆ. ಹಿಟ್ಲರ್‌ ಆಡಳಿತದ ಪ್ರತೀಕ ಎಂದು ಆರೋಪಿಸಿದರು.

ಮಾಜಿಸಚಿವ ರಾಜಶೇಖರ್‌ ಪಾಟೀಲ್‌ ಹುಮನಾಬಾದ್‌, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್‌, ಭೀಮರಾವ್ ಪಾಟೀಲ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ ಜಾಹಗೀರದಾರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಸಮಿ, ಜಾರ್ಜ್ ಫರ್ನಾಂಡಿಸ್, ಎಸ್‌ಸಿ ಘಟಕದ ಅಧ್ಯಕ್ಷ ವಿನೋದ್‌ ಅಪ್ಪೆ, ಡಿ.ಕೆ. ಸಂಜುಕುಮಾರ, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಗೋಡ್ಸೆ ಹೆಸರು ಇಡುವಿರಾ?

ಕೇಂದ್ರದ ಬಿಜೆಪಿ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯವನ್ನೇ ಬುಡಮೇಲು ಹೊರಟಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಮಹಾತ್ಮ ಗಾಂಧೀಜಿ. ಅವರ ಹೆಸರು ತೆಗೆದು ಹಾಕಿರುವುದು ಎಷ್ಟು ಸರಿ? ಮತಕ್ಕಾಗಿ ಇವರಿಗೆ ಗಾಂಧೀಜಿ ಹೆಸರು ಬೇಕು. ಇವರು ಏನು ಮಾಡಲು ಹೊರಟಿದ್ದಾರೆ. ಗಾಂಧೀಜಿ ಕೊಲೆ ಮಾಡಿದ ಗೋಡ್ಸೆ ಹೆಸರು ಇಡುವಿರಾ? ಬಿಜೆಪಿಯವರಿಗೆ ಗಾಂಧೀಜಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಸಚಿವ ಈಶ್ವರ ಬಿ. ಖಂಡ್ರೆ ಜರಿದರು.

ಬಿಜೆಪಿಯವರು ನಕಲಿ ರಾಷ್ಟ್ರೀಯವಾದಿಗಳು. ಇವರು ಬಡವರ ವಿರೋಧಿಗಳು. ಮುಂಬರುವ ಏಪ್ರೀಲ್‌–ಮೇ ನಲ್ಲಿ ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಎಲ್ಲೆಡೆ ಕಾಂಗ್ರೆಸ್‌ ಜಯ ಗಳಿಸಲಿದೆ. ಬಿಜೆಪಿಗೆ ಜನಬೆಂಬಲ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.