ಬೆಂಗಳೂರು: ‘ಆನೆ- ಮಾನವ ಸಂಘರ್ಷ ತಡೆಗಟ್ಟಲು ‘ಆನೆ ವಿಹಾರಧಾಮ’ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ಸೂಕ್ತವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆನೆ ವಿಹಾರಧಾಮ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ವನ್ಯಜೀವಿ- ಮಾನವ ಸಂಘರ್ಷ ಹಾಗೂ ರೈಲ್ವೆ ಬ್ಯಾರಿಕೇಡ್ ಯೋಜನೆಗಳನ್ನು ಅಂತಿಮಗೊಳಿಸುವ ಕುರಿತಂತೆ ಅಧಿಕಾರಿಗಳ ಜೊತೆ ಅವರು ಶನಿವಾರ ವಿಡಿಯೊ ಸಂವಾದ ನಡೆಸಿದರು.
‘ಆನೆ ವಿಹಾರಧಾಮ ಸ್ಥಾಪಿಸಲು ಚಿಕ್ಕಮಗಳೂರಿನ ಮುತ್ತೋಡಿಗಿಂತಲೂ ತಣಿಗೆಬೈಲು ಸೂಕ್ತ ಪ್ರದೇಶ ಎಂದು ತಜ್ಞರು ವರದಿ ನೀಡಿದ್ದಾರೆ. ಈ ಕುರಿತಂತೆ ಸ್ಥಳೀಯರ ಜೊತೆ ಚರ್ಚಿಸಲಾಗುವುದು’ ಎಂದು ಖಂಡ್ರೆ ಹೇಳಿದ್ದಾರೆ.
‘ಆನೆಗಳ ಸಮಸ್ಯೆ ಯಾವ ವಲಯದಲ್ಲಿ ಹೆಚ್ಚಾಗಿದೆ. ಆನೆಗಳ ದಾಳಿ ನಡೆಯುವ ಸಮಯ, ಕಾರಣ ಕುರಿತಂತೆ ಅಧ್ಯಯನ ನಡೆಸಿ, ಸ್ಥಳೀಯರಿಗೆ ಮುನ್ನಚ್ಚರಿಕೆ ನೀಡಬೇಕು’ ಎಂದು ಖಂಡ್ರೆ ಸೂಚಿಸಿದರು.
‘ಮುಂದಿನ ವಾರ ದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರನ್ನು ಭೇಟಿ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಆನೆ ವಿಹಾರಧಾಮ ಕುರಿತಂತೆ ಚರ್ಚಿಸಲಾಗುವುದು. ಜೊತೆಗೆ, ಕಾಂಪಾ (ಅರಣ್ಯೀಕರಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು’ ಎಂದಿದ್ದಾರೆ.
ವನ್ಯಜೀವಿ - ಮಾನವ ಸಂಘರ್ಷ ತಡೆಗೆ ಸಮಗ್ರ ಕಮಾಂಡ್ ಸೆಂಟರ್ ಸ್ಥಾಪಿಸಲು ಸೂಚನೆ ನೀಡಿದ್ದರೂ ವಿಳಂಬವಾಗುತ್ತಿದೆ. ಕೂಡಲೇ ಈ ಬಗ್ಗೆ ಕಾರ್ಯಯೋಜನೆ ರೂಪಿಸಬೇಕು. ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಟ್ಟು ಸ್ಥಳೀಯರಿಗೆ ಕಾಲ ಕಾಲಕ್ಕೆ ಮುನ್ನೆಚ್ಚರಿಕೆ ನೀಡಲು ಮತ್ತು ವನ್ಯಮೃಗಗಳು ನಾಡಿಗೆ ಬಂದಿರುವ ಬಗ್ಗೆ ಸ್ವೀಕರಿಸುವ ದೂರಿಗೆ ತಕ್ಷಣವೇ ಸ್ಪಂದಿಸಲಾಗಿದೆಯೇ ಎಂಬುದನ್ನು ಕೇಂದ್ರ ಸ್ಥಾನದಲ್ಲಿ ಕುಳಿತು ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ಮಾಡಬೇಕು‘ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಸನ್ನಾ ಮತ್ತು ಲಂಟಾನ ಕಳೆಗಳು ವಿಪರೀತವಾಗಿ ಕಾಡನ್ನು ಆವರಿಸುತ್ತಿವೆ. ತಮಿಳುನಾಡು ಮತ್ತು ಕೇರಳದಲ್ಲಿ ಇದನ್ನು ಹೇಗೆ ನಿರ್ವಹಿಸಲಾಗಿದೆ ಎಂಬ ಮಾಹಿತಿ ಪಡೆದು, ಈ ಕಳೆ ನಾಶಕ್ಕೆ ಕ್ರಮ ಕೈಗೊಳ್ಳಬೇಕು’ ಎಂದೂ ಸೂಚಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೀನಾಕ್ಷಿ ನೇಗಿ ಮತ್ತು ಪಿ.ಸಿ. ರೇ, ಆನೆ ಸಂಘರ್ಷ ಇರುವ ವಲಯಗಳ ಉನ್ನತಾಧಿಕಾರಿಗಳು ವಿಡಿಯೊ ಸಂವಾದದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.