
ನವದೆಹಲಿ: ಎತ್ತಿನಹೊಳೆ ಯೋಜನೆಯ ಕಾಮಗಾರಿಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ 432 ಎಕರೆ ಅರಣ್ಯ ಬಳಸಲು ಕೇಂದ್ರ ಅರಣ್ಯ ಸಚಿವಾಲಯದ ತಜ್ಞರ ಸಮಿತಿ ತಾತ್ವಿಕ ಅನುಮೋದನೆ ನೀಡಲು ಒಪ್ಪಿಲ್ಲ.
ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳದ ಕಾವಲ್, ಕಂಚಿಗಾನಹಳ್ಳಿ ಹಾಗೂ ಹಾಸನದ ಐದಹಳ್ಳಿ ಕಾವಲ್, ಕುಮರಿಹಳ್ಳಿ ಗ್ರಾಮದ ಅರಣ್ಯ ಭೂಮಿ ಬಳಸಲು ಒಪ್ಪಿಗೆ ನೀಡುವಂತೆ ಕರ್ನಾಟಕ ಅರಣ್ಯ ಇಲಾಖೆಯು ಅಕ್ಟೋಬರ್ 8ರಂದು ಪ್ರಸ್ತಾವ ಸಲ್ಲಿಸಿತ್ತು. ಪ್ರಸ್ತಾವದ ಪರಾಮರ್ಶೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿಗೆ ಸಚಿವಾಲಯ ಕಳುಹಿಸಿತ್ತು. ಸಮಿತಿಯು ಯೋಜನೆಯ ಕಾಮಗಾರಿಗೆ ಮತ್ತೆ ತರಕಾರು ಎತ್ತಿದೆ.
‘ಯೋಜನೆಯ ಕಾಲುವೆ ನಿರ್ಮಾಣಕ್ಕೆ ಅಕ್ರಮವಾಗಿ 107 ಹೆಕ್ಟೇರ್ ಬಳಕೆ ಮಾಡಿರುವುದನ್ನು ಸಚಿವಾಲಯದ ಉನ್ನತ ಅಧಿಕಾರಿಗಳ ಸಮಿತಿ ಪತ್ತೆ ಹಚ್ಚಿ ವರದಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರವು 0.04 ಹೆಕ್ಟೇರ್ ಉಲ್ಲಂಘನೆ ಪ್ರಕರಣದಲ್ಲಷ್ಟೇ ಎಫ್‌ಐಆರ್ ದಾಖಲಿಸಿದೆ. ಇದು ಗಂಭೀರ ಲೋಪ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
‘ಯೋಜನೆ ಅನುಷ್ಠಾನಗೊಳಿಸುತ್ತಿರುವ ವಿಶ್ವೇಶ್ವರಯ್ಯ ಜಲ ನಿಗಮದಿಂದ ಈ ಲೋಪ ಆಗಿದೆಯೇ ಎಂಬ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಹಾಗೂ ಸಚಿವಾಲಯದ ಪ್ರಾದೇಶಿಕ ಕಚೇರಿ ಜಂಟಿ ವರದಿ ಸಲ್ಲಿಸಬೇಕು. ಪ್ರಾದೇಶಿಕ ಕಚೇರಿಯು ಪ್ರತ್ಯೇಕವಾಗಿ ವರದಿ ಸಲ್ಲಿಸಲು ಅವಕಾಶ ಇದೆ. ಈ ಸಂಬಂಧ ಪ್ರಾದೇಶಿಕ ಕಚೇರಿಯು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ನಿರ್ದೇಶನ ನೀಡಿದೆ.
432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ಕೋರಿ ರಾಜ್ಯ ಸರ್ಕಾರ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂಬ ಕಾರಣ ನೀಡಿ ಕೇಂದ್ರ ಅರಣ್ಯ ಸಲಹಾ ಸಮಿತಿ ಅನುಮೋದನೆ ಕೊಟ್ಟಿರಲಿಲ್ಲ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ತಾಕೀತು ಮಾಡಿತ್ತು. ಇದರಿಂದಾಗಿ, ಎತ್ತಿನಹೊಳೆ ಕಾಮಗಾರಿ ಸ್ಥಗಿತವಾಗಿತ್ತು.
‘ಕಂದಾಯ ಭೂಮಿಯೆಂದು ಭಾವಿಸಿ 107 ಹೆಕ್ಟೇರ್ ಬಳಸಲಾಗಿತ್ತು. ಇದು ಉದ್ದೇಶಪೂರ್ವಕ ಉಲ್ಲಂಘನೆ ಅಲ್ಲ. ಈ ಲೋಪವನ್ನು ಮನ್ನಿಸಿ ಕಾಮಗಾರಿ ನಡೆಸಲು ಒಪ್ಪಿಗೆ ನೀಡಬೇಕು’ ಎಂದು ರಾಜ್ಯ ಸರ್ಕಾರ ಕೋರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.