ADVERTISEMENT

ಎತ್ತಿನಹೊಳೆ ಅಕ್ರಮ ವ್ಯಾಪಕ: ಕೇಂದ್ರ ತಂಡ

ಷರತ್ತು ಪಾಲಿಸಿದರಷ್ಟೇ ಹೆಚ್ಚುವರಿ 432 ಎಕರೆ ಅರಣ್ಯ ಬಳಕೆಗೆ ಅನುಮತಿ: ಅರಣ್ಯ ಸಚಿವಾಲಯ

ಮಂಜುನಾಥ್ ಹೆಬ್ಬಾರ್‌
Published 26 ಏಪ್ರಿಲ್ 2025, 22:30 IST
Last Updated 26 ಏಪ್ರಿಲ್ 2025, 22:30 IST
<div class="paragraphs"><p>ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರಲ್ಲಿ ಸಕಲೇಶಪುರದ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ಇರುವ ನೀರು ಸಂಗ್ರಹ ಟ್ಯಾಂಕ್‌ </p></div>

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರಲ್ಲಿ ಸಕಲೇಶಪುರದ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ಇರುವ ನೀರು ಸಂಗ್ರಹ ಟ್ಯಾಂಕ್‌

   

 –ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್ ಪಿ.ಎಸ್.-

ನವದೆಹಲಿ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ₹23 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಷರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿ ನಡೆಸಿರುವುದನ್ನು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ತಂಡ ಪತ್ತೆ ಹಚ್ಚಿದೆ. ರಾಜ್ಯ ಸರ್ಕಾರವು ಲೋಪಗಳನ್ನು ಸರಿಪಡಿಸಿ ಸೂಕ್ತ ಸಮಜಾಯಿಷಿ ನೀಡಿದ ಬಳಿಕವೇ ಹೆಚ್ಚುವರಿಯಾಗಿ 432 ಎಕರೆ (173 ಹೆಕ್ಟೇರ್‌) ಅರಣ್ಯ ಬಳಕೆಗೆ ಅನುಮೋದನೆ ನೀಡಬಹುದು ಎಂದು ಸಮಿತಿ ಶಿಫಾರಸು ಮಾಡಿದೆ. 

ADVERTISEMENT

ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣಕ್ಕೆ ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವಂತೆ ಕೋರಿ ರಾಜ್ಯ ಸರ್ಕಾರವು ಪರಿಸರ ಸಚಿವಾಲಯಕ್ಕೆ ಮಾರ್ಚ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಸಚಿವಾಲಯದ ಡಿಐಜಿಎಫ್‌ ಪ್ರಣಿತಾ ಪೌಲ್‌ ನೇತೃತ್ವದ ಅಧಿಕಾರಿಗಳ ತಂಡವು ಇದೇ 7ರಿಂದ 9ರ ವರೆಗೆ ಯೋಜನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. ಕಾಮಗಾರಿಯ ಸಂದರ್ಭದಲ್ಲಿ ನಿಯಮಗಳನ್ನು ಮನಸೋ ಇಚ್ಛೆ ಉಲ್ಲಂಘಿಸಲಾಗಿದೆ ಎಂದು ಬೊಟ್ಟು ಮಾಡಿ ತೋರಿಸಿದೆ. ನಿಯಮ ಉಲ್ಲಂಘಿಸಿದ ವಿಶ್ವೇಶ್ವರಯ್ಯ ಜಲ ನಿಗಮದ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿ ಕೈತೊಳೆದುಕೊಂಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ತಂಡದ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. 

ಯೋಜನೆಯ ಬಗ್ಗೆ ಸಮಗ್ರ ಪ್ರಸ್ತಾವನೆ ಸಲ್ಲಿಸುವಲ್ಲಿ ಜಲನಿಗಮ ವಿಫಲವಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನಿಗಮವು ಈ ಹಿಂದೆ ತಿಳಿಸಿತ್ತು. ಆದರೆ, ವಿಸ್ತೃತ ಪ್ರಸ್ತಾವನೆಯಲ್ಲಿ ತುಮಕೂರು ಹಾಗೂ ಹಾಸನ ಜಿಲ್ಲೆಗಳನ್ನಷ್ಟೇ ಉಲ್ಲೇಖಿಸಲಾಗಿದೆ ಎಂದು ತಂಡವು ತಿಳಿಸಿದೆ. 

ಪಶ್ಚಿಮ ಘಟ್ಟದ ಎತ್ತಿನಹೊಳೆಯಿಂದ 24 ಟಿಎಂಸಿ ನೀರು ಹರಿಸುವ ಈ ಯೋಜನೆಗೆ ಈ ಹಿಂದೆ 13.93 ಹೆಕ್ಟೇರ್ ಅರಣ್ಯ ಬಳಕೆಗೆ 2016ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. 33 ಷರತ್ತುಗಳನ್ನು ವಿಧಿಸಿ 2016ರಲ್ಲಿ ಅನುಮೋದನೆ ಕೊಡಲಾಗಿತ್ತು. ಆದರೆ, ಬಹುತೇಕ ಷರತ್ತುಗಳನ್ನು ಪಾಲನೆ ಮಾಡಿಲ್ಲ. ಕಾಮಗಾರಿ ಸಂದರ್ಭದಲ್ಲಿ ಭೂಕುಸಿತ ಹಾಗೂ ಮಣ್ಣಿನ ಕೊರೆತ ಉಂಟಾಗಿದೆ ಎಂದು ಎನ್‌ಜಿಟಿಯ ಮೇಲ್ಚಿಚಾರಣಾ ತಂಡವು 2019ರಲ್ಲಿ ವರದಿ ಸಲ್ಲಿಸಿತ್ತು. ಭೂಕುಸಿತ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಜತೆಗೆ, ಅನುಮೋದನೆಗಿಂತ ಹೆಚ್ಚುವರಿ ಅರಣ್ಯ ಬಳಸಲಾಗಿದೆ. ಕಾಮಗಾರಿಯಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಆದರೆ, ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ತಂಡ ಆಕ್ಷೇಪಿಸಿದೆ. 

ತಂಡದ ವರದಿಯ ಆಧಾರದಲ್ಲಿ ಸಚಿವಾಲಯದ ಡಿಡಿಜಿಎಫ್‌ ಎಸ್.ಸೆಂಥಿಲ್‌ ಕುಮಾರ್, ‘‘ಈ ಯೋಜನೆಗೆ 2000 ಹೆಕ್ಟೇರ್ ಅರಣ್ಯೇತರ ಜಾಗ ಬಳಸಿಕೊಳ್ಳಲಾಗುತ್ತದೆ. ಆದರೆ, ಅವಶೇಷಗಳನ್ನು ಸುರಿಯಲು ಅರಣ್ಯ ಬಳಸುತ್ತಿರುವುದು ಸರಿಯಲ್ಲ. ಅರಣ್ಯದಲ್ಲಿ ಆಳವಾದ ಹಾಗೂ ಅಸುರಕ್ಷಿತ ಸುರಂಗ ನಿರ್ಮಾಣ ಮಾಡುವುದರಿಂದ ಕಾಡುಪ್ರಾಣಿಗಳಿಗೆ ಆಪತ್ತು ಉಂಟಾಗಲಿದೆ. ರಾಜ್ಯ ಸರ್ಕಾರ ಷರತ್ತುಗಳನ್ನು ಪಾಲಿಸಿದ ಬಳಿಕವೇ 177 ಹೆಕ್ಟೇರ್ ಬಳಸಲು ಒಪ್ಪಿಗೆ ನೀಡಬಹುದು. ನಿಯಮ ಉಲ್ಲಂಘನೆಯಾಗಿ ದಂಡ ವಿಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಿಫಾರಸು ಮಾಡಿದ್ದಾರೆ. 

ಎಫ್‌ಐಆರ್ ನಂತರ ಮತ್ತಷ್ಟು ಉಲ್ಲಂಘನೆ

173 ಹೆಕ್ಟೇರ್ ಅರಣ್ಯ ಬಳಕೆಗೆ ರಾಜ್ಯ ಸರ್ಕಾರ ಅನುಮೋದನೆ ಕೇಳಿದೆ. ಆದರೆ, ಕಾಲುವೆ ನಿರ್ಮಾಣಕ್ಕಾಗಿ ಹಾಸನ ವಿಭಾಗದಲ್ಲಿ ಈಗಾಗಲೇ 108 ಹೆಕ್ಟೇರ್ ನಿಯಮಬಾಹಿರವಾಗಿ ಬಳಸಿಕೊಳ್ಳಲಾಗಿದೆ. ಈ ಸಂಬಂಧ 2019ರಲ್ಲೇ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಇದರ ಬಗ್ಗೆ ಸಮಗ್ರ ವಿಶ್ಲೇಷಣೆ ನಡೆಸಲು ಉಪಗ್ರಹ ಚಿತ್ರಗಳನ್ನು ಪರಿಶೀಲನೆ ನಡೆಸಲಾಗಿದೆ. ಎಫ್‌ಐಆರ್‌ ದಾಖಲಿಸಿದ ಬಳಿಕ ಅರಣ್ಯ ಕಾಯ್ದೆ ಉಲ್ಲಂಘನೆಯ ಇನ್ನಷ್ಟು ಪ್ರಕರಣಗಳು ನಡೆದಿವೆ. ಇದರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರವು ಸಮಗ್ರ ವರದಿ ಸಲ್ಲಿಸಬೇಕು ಎಂದು ತಂಡ ನಿರ್ದೇಶನ ನೀಡಿದೆ. 

ಕಾಡುಪ್ರಾಣಿಗಳ ಸಂಚಾರಕ್ಕೆ ತೊಂದರೆ

ಈ ಯೋಜನೆಯಿಂದಾಗಿ ಆನೆ ಸೇರಿದಂತೆ ಕಾಡುಪ್ರಾಣಿಗಳ ಸಂಚಾರಕ್ಕೆ ಭಾರಿ ತೊಂದರೆ ಆಗಲಿದೆ. ನೀರಿನ ಕಾಲುವೆಗಳಿಗೆ ಬೇಲಿ ನಿರ್ಮಿಸುವ ಬಗ್ಗೆ ರಾಜ್ಯ ಪ್ರಸ್ತಾಪಿಸಿಲ್ಲ. ಇದರಿಂದಾಗಿ, ಕಾಡುಪ್ರಾಣಿಗಳು ಕಾಲುವೆಗೆ ಬಿದ್ದು ಗಾಯ/ಸಾಯುವ ಸಂಭವ ಇದೆ. ಕಾಲುವೆಯ ಸುತ್ತ ಬೇಲಿ ನಿರ್ಮಿಸಬೇಕಾದ ತುರ್ತು ಅಗತ್ಯ ಇದೆ. ಇದಕ್ಕಾಗಿ ಪಿಸಿಸಿಎಫ್‌ (ವನ್ಯಜೀವಿ) ನೇತೃತ್ವದಲ್ಲಿ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ತಂಡ ಸೂಚಿಸಿದೆ.

‘ ಇದು ನೀರಾವರಿ ಯೋಜನೆಯೊ’ 

ಈ ಯೋಜನೆಯಿಂದಾಗಿ ಪಶ್ಚಿಮ ಘಟ್ಟದ ಮೇಲಾಗುವ ಪರಿಣಾಮದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಈ ಹಿಂದೆ ನಿರ್ದೇಶನ ನೀಡಲಾಗಿತ್ತು. ಆದರೆ, ಈ ವರೆಗೆ ವರದಿ ಸಲ್ಲಿಕೆಯಾಗಿಲ್ಲ. ಇದು ಕುಡಿಯುವ ನೀರಿನ ಯೋಜನೆಯೋ ಅಥವಾ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಯ ಸಂಯೋಜನೆಯೋ ಎಂಬುದು ಸ್ಪಷ್ಟವಾಗಿಲ್ಲ. ಎತ್ತಿನಹೊಳೆ ನೀರನ್ನು ಬಳಸಿ ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮವು ತನ್ನ ಸಮರ್ಥನೆಯಲ್ಲಿ ತಿಳಿಸಿದೆ. ಈ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ತಂಡ ಸೂಚಿಸಿದೆ.

ಅವಶೇಷ ಸುರಿಯಲು 103 ಹೆಕ್ಟೇರ್‌ 

173 ಹೆಕ್ಟೇರ್‌ನ ಪೈಕಿ 103 ಹೆಕ್ಟೇರ್ ಅನ್ನು ಮಣ್ಣು ಹಾಗೂ ಅವಶೇಷ ಸುರಿಯಲು ಬಳಸಿಕೊಳ್ಳಲಾಗುತ್ತಿದೆ. ಅಂದರೆ, ಶೇ 60ರಷ್ಟು ಜಾಗ ಇದಕ್ಕೆ ಬಳಕೆಯಾಗುತ್ತಿದೆ. ಅರಣ್ಯದ ಹೊರಗಡೆ ತ್ಯಾಜ್ಯ/ಅವಶೇಷ
ಗಳನ್ನು ವಿಲೇವಾರಿ ಮಾಡಬೇಕು ಎಂದು ಕರ್ನಾಟಕ ಅರಣ್ಯ ಇಲಾಖೆಯೇ ಷರತ್ತು ವಿಧಿಸಿದೆ. ಕಾಲುವೆ ನಿರ್ಮಾಣಕ್ಕೆ ಬೇಕಿರುವುದು 69 ಹೆಕ್ಟೇರ್ ಅರಣ್ಯವಷ್ಟೇ. ಹೀಗಾಗಿ, ಪ್ರಸ್ತಾವದ ಪರಿಷ್ಕರಣೆ ಅಗತ್ಯ ಎಂದು ತಂಡ ಶಿಫಾರಸು ಮಾಡಿದೆ. 

ತುಮಕೂರು ಜಿಲ್ಲೆಯಲ್ಲಿ ಬಳಸಲು ಉದ್ದೇಶಿಸಿರುವ 12.84 ಹೆಕ್ಟೇರ್ ಅರಣ್ಯವು ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿದೆ. ಇಲ್ಲಿ ಅಪರೂಪದ ಮರಗಳು ಹಾಗೂ ವನ್ಯಜೀವಿಗಳಿವೆ. 7,500 ಮರಗಳನ್ನು ಕಡಿಯಬೇಕಾಗುತ್ತದೆ. ಇಲ್ಲಿ ಕಾಮಗಾರಿ ನಡೆಸಿದರೆ ಅರಣ್ಯ ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ. ಅವಶೇಷ ಸಂಗ್ರಹದಿಂದ ಅರಣ್ಯಕ್ಕೆ ಮತ್ತಷ್ಟು ಹಾನಿಯಾಗಲಿದೆ. ಹೀಗಾಗಿ, ಇಲ್ಲಿ ಭೂಗತ ಸುರಂಗ ನಿರ್ಮಿಸುವುದು ಸೂಕ್ತ ಎಂದು ತಂಡ ಸಲಹೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.