ADVERTISEMENT

ಒಡಿಶಾದಂತೆ ಪ್ರತಿ ರಾಜ್ಯಗಳೂ ಒಂದೊಂದು ಕ್ರೀಡೆ ಪ್ರೋತ್ಸಾಹಿಸಬೇಕು: ಎಚ್‌ಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 11:00 IST
Last Updated 8 ಆಗಸ್ಟ್ 2021, 11:00 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಹಾಕಿ ಕ್ರೀಡೆಯನ್ನು ಒಡಿಶಾ ಪ್ರೋತ್ಸಾಹಿಸಿದಂತೆ ಎಲ್ಲ ರಾಜ್ಯಗಳೂ ಒಂದೊಂದು ಕ್ರೀಡೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಒಡಿಶಾದ ಕ್ರಮ ಅನುಕರಣೀಯ ಎಂದೂ ಅವರು ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾ ಕೂಟದ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಭಾರತದ ನೀರಜ್‌ ಚೋಪ್ರಾ ಚಿನ್ನ ಗೆಲ್ಲುತ್ತಲೇ ಟ್ವೀಟ್‌ ಮಾಡಿರುವ ಎಚ್.ಡಿ ಕುಮಾರಸ್ವಾಮಿ, ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಟ್ವೀಟ್‌ನಲ್ಲಿ ಕ್ರೀಡೆ ಅಭಿವೃದ್ಧಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಅವರು ಮಾತನಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ನಮ್ಮ ಹಾಕಿ ತಂಡಗಳು ಅಚ್ಚರಿ ಮೂಡಿಸಿದ್ದು, 41 ವರ್ಷಗಳ ಬಳಿಕ ಪುರುಷರ ತಂಡ ಪದಕ ಗೆದ್ದರೆ, ಮಹಿಳಾ ತಂಡ ನೆನಪಿಟ್ಟುಕೊಳ್ಳುವ ಸಾಧನೆ ಮಾಡಿದೆ. ಇದರ ಹಿಂದೆ ಒಡಿಶಾ ಸರ್ಕಾರದ ಪ್ರೋತ್ಸಾಹ ಇರುವುದು ಗಮನಾರ್ಹ. ಹಾಕಿ ತಂಡಗಳ ಪ್ರಯೋಜಕತೆ ಪಡೆದ ಒಡಿಶಾ, ಸಕಲವನ್ನು ಒದಿಗಿಸಿ ಪ್ರೋತ್ಸಾಹಿಸಿತು. ಒಡಿಶಾದ ಕ್ರಮ ಅನುಕರಣೀಯ ಎಂದು ಹೇಳಿದ್ದಾರೆ.

ADVERTISEMENT

ಒಡಿಶಾ ಹಾಕಿಯನ್ನು ಪ್ರೋತ್ಸಾಹಿಸಿದಂತೆ ಎಲ್ಲ ರಾಜ್ಯಗಳೂ ಒಂದೊಂದು ಕ್ರೀಡೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಈ ಮೂಲಕ ಪ್ರತಿಯೊಂದು ಕ್ರೀಡೆಗೆ ಪ್ರೋತ್ಸಾಹ ಸಿಗುವಂತೆ ಮಾಡುವುದು, ವಿಶ್ವ ಮಟ್ಟದ ಕೂಟದಲ್ಲಿ ಭಾರತದ ಘನತೆ ಎತ್ತಿ ಹಿಡಿಯುವುದು ಆದ್ಯತೆ ಆಗಬೇಕು. ಸಂಸದೀಯ ಸ್ಥಾಯಿಸಮಿತಿ(ಕ್ರೀಡೆ) ಇದೇ ಶಿಫಾರಸ್ಸನ್ನು ಕೇಂದ್ರಕ್ಕೆ ಮಾಡಿದೆ ಎಂದೂ ಅವರು ಹೇಳಿದ್ದಾರೆ.

2018ರಲ್ಲಿ ಭಾರತದ ಹಾಕಿ ತಂಡಗಳ (ಪುರುಷರ ಮತ್ತು ಮಹಿಳೆಯರ ತಂಡ) ಪ್ರಾಯೋಜಕತ್ವ ಪಡೆದ ಒಡಿಶಾ ಸರ್ಕಾರ ಎರಡೂ ತಂಡಗಳಿಗೆ ಉತ್ತಮ ತರಬೇತಿ, ಪ್ರೋತ್ಸಾಹ ನೀಡಿದೆ. ಇದರ ಫಲವಾಗಿ ಹಾಕಿ ತಂಡಗಳು ಒಲಿಂಪಿಕ್ಸ್‌ನಲ್ಲಿ ಅಚ್ಚರಿಯ ಪ್ರದರ್ಶನ ನೀಡಿವೆ. ಪರುಷರ ತಂಡ ಮೂರನೇ ಸ್ಥಾನಕ್ಕೇರಿ ಕಂಚಿನ ಪದಕ ಗಳಿಸಿದರೆ, ಮಹಿಳಾ ತಂಡ ನಾಲ್ಕನೇ ಸ್ಥಾನಕ್ಕೇರಿದೆ. ಹಾಕಿ ಪ್ರೋತ್ಸಾಹ ಕ್ರಮಗಳಿಗಾಗಿ ಒಡಿಶಾಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.