ADVERTISEMENT

EVM ವಿಶ್ವಾಸಾರ್ಹ ಸಮೀಕ್ಷೆ: ಶೇ 83.61ರಷ್ಟು ಮಂದಿ ಮತಯಂತ್ರದ ಪರ

102 ವಿಧಾನಸಭಾ ಕ್ಷೇತ್ರಗಳ 5,100 ಮಂದಿ ಭಾಗಿ/ ಶೇ 83.61ರಷ್ಟು ಮಂದಿ ಮತಯಂತ್ರದ ಪರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 18:42 IST
Last Updated 1 ಜನವರಿ 2026, 18:42 IST
<div class="paragraphs"><p>ಮತಯಂತ್ರ.</p></div>

ಮತಯಂತ್ರ.

   

ಬೆಂಗಳೂರು: ರಾಜ್ಯದಲ್ಲಿ ನಡೆದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 5,100 ಜನರ ಪೈಕಿ ಶೇ 83.61ರಷ್ಟು ಜನರು ‘ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ನಿಖರ ಫಲಿತಾಂಶ ನೀಡುತ್ತವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ. ವರದಿಯಲ್ಲಿ ಈ ಮಾಹಿತಿಗಳಿವೆ. ಪ್ರಾಧಿಕಾರವು ‘ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ’ ಅಧೀನದಲ್ಲಿದೆ. ಮೈಸೂರು ಮೂಲದ ‘ಗ್ರಾಸ್‌ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್‌ಮೆಂಟ್’ (ಜಿಆರ್‌ಎಎಎಂ) ಸಂಸ್ಥೆಯು 2025ರ ಮೇ ತಿಂಗಳಿನಲ್ಲಿ ಈ ಸಮೀಕ್ಷೆ ನಡೆಸಿತ್ತು. 

ADVERTISEMENT

ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಕಂದಾಯ ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆದಿತ್ತು.

‘ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇವಿಎಂಗಳ ಮೇಲಿನ ನಂಬಿಕೆ ಜನರಲ್ಲಿ ಹೆಚ್ಚಾಗಿದೆ’ ಎಂದೂ ವರದಿ ಹೇಳಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ 5,100 ಜನರಲ್ಲಿ ಶೇ 95.75 ರಷ್ಟು ಮಂದಿ 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ ಎಂದು ಹೇಳಿದ್ದಾರೆ. ಶೇ 95.44ರಷ್ಟು ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ವಿವರ ಸರಿ ಇರುವುದಾಗಿ ದೃಢಪಡಿಸಿದ್ದಾರೆ ಎಂದು ವರದಿ ಹೇಳಿದೆ.

ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಸರಾಸರಿ ಶೇ 84.55 ಜನರು ಹೇಳಿದ್ದಾರೆ. ಅದರಲ್ಲೂ ಕಲಬುರಗಿ ವಿಭಾಗದಲ್ಲಿ ಅತೀ ಹೆಚ್ಚು ಶೇ 84.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆ ಪೈಕಿ ಶೇ 10.19ರಷ್ಟು ಜನರು ಈ ಅಭಿಪ್ರಾಯವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಬೆಳಗಾವಿ ವಿಭಾಗದ ಶೇ 69.62ರಷ್ಟು ಜನರು ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದಿದ್ದಾರೆ. ಈ ಪೈಕಿ, ಶೇ 19.24ರಷ್ಟು ಜನರು ಈ ಅಭಿಪ್ರಾಯವನ್ನು ಬಲವಾಗಿ ಸಮರ್ಥಿಸಿದ್ದಾರೆ ಎಂದೂ ವರದಿಯಲ್ಲಿದೆ.

ಇವಿಎಂಗಳು ‘ನಿಖರ’ ಫಲಿತಾಂಶಗಳನ್ನು ನೀಡುತ್ತವೆ ಎಂದು ಶೇ 83.61ರಷ್ಟು ನಾಗರಿಕರು ನಂಬಿದ್ದಾರೆ. ಕಲಬುರಗಿ ವಿಭಾಗದಲ್ಲಿ ಈ ನಂಬಿಕೆ ಅತೀ ಹೆಚ್ಚಾಗಿದ್ದು, ಅಲ್ಲಿ ಶೇ 83.24ರಷ್ಟು ಜನರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಶೇ 11.24 ಜನರು ಬಲವಾಗಿ ಒಪ್ಪಿಕೊಂಡಿದ್ದಾರೆ. ಮೈಸೂರು ವಿಭಾಗದಲ್ಲಿ ಶೇ 70.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೇ  17.92ರಷ್ಟು ಜನರು ಬಲವಾಗಿ ಸಮರ್ಥಿಸಿದ್ದಾರೆ. ಅಲ್ಲದೆ, ಇವಿಎಂಗಳ ಮೇಲಿನ ನಂಬಿಕೆ 2023ರಲ್ಲಿ ಶೇ 77.90ರಷ್ಟಿದ್ದರೆ, ಈಗ ಶೇ 83.61ಕ್ಕೆ ವೃದ್ಧಿಸಿದೆ ಎಂದೂ ವರದಿ ಹೇಳಿದೆ.

‘ಇವಿಎಂ ಬಳಕೆ ಮಾಡಿದಾಗ, ಅವುಗಳಲ್ಲಿ ದಾಖಲಾಗುವ ವಿವರಗಳನ್ನು ಬದಲಾಯಿಸಬಹುದು, ಅದು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು. ನಂತರದಲ್ಲಿ, ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬದಲಿಗೆ ಮತಪತ್ರಗಳನ್ನು ಬಳಕೆ ಮಾಡಲು ಸಚಿವ ಸಂಪುಟ ಶಿಫಾರಸು ಮಾಡಿದೆ.

ಮಹದೇವಪುರ ಮತ್ತು ಆಳಂದ ಮತಕ್ಷೇತ್ರದಲ್ಲಿ ಮತ ಕಳವು ನಡೆದಿದೆ ಎಂದು ಆರೋಪಿಸಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ 'ಮತ ಕಳವು' ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆಯೇ, ಈ ಸಮೀಕ್ಷಾ ವರದಿಯ ಮಾಹಿತಿ ಹೊರಬಿದ್ದಿದೆ.

ಕಾಂಗ್ರೆಸ್‌ಗೆ ಕಪಾಳ ಮೋಕ್ಷ: ಅಶೋಕ ‘ಇವಿಎಂಗಳು ವಿಶ್ವಾಸಾರ್ಹವಲ್ಲ. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್‌ ಗಾಂಧಿ ಕಥೆ ಹೇಳುತ್ತಿದ್ದರೆ ಈ ಸಮೀಕ್ಷೆಯು ಕಾಂಗ್ರೆಸ್‌ಗೆ ಕಪಾಳ ಮೋಕ್ಷ ಮಾಡಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಪ್ರತಿಕ್ರಿಯಿಸಿದ್ದಾರೆ. ‘ಎಕ್ಸ್‌’ ಮಾಡಿರುವ ಅವರು‌ ‘ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಾವಿರಾರು ಮತದಾರರಿಂದ ಸಂಗ್ರಹಿಸಿದ ಅಭಿಪ್ರಾಯವು ಸರಳ ಪ್ರಬಲ ಸತ್ಯವನ್ನು ಬಹಿರಂಗಪಡಿಸಿದೆ. ಜನರು ಚುನಾವಣೆಗಳನ್ನು ಇವಿಎಂಗಳನ್ನು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಂಬುತ್ತಾರೆ. ಮತದಾರರು ಪ್ರಬುದ್ಧತೆ ಪ್ರದರ್ಶಿಸಿದಾಗ ಕಾಂಗ್ರೆಸ್ ಅಭದ್ರತೆ ಪ್ರದರ್ಶಿಸುತ್ತದೆ. ನಾಗರಿಕರು ವಿಶ್ವಾಸ ತೋರಿಸಿದಾಗ ಕಾಂಗ್ರೆಸ್ ಅನುಮಾನ ತೋರಿಸುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.