ADVERTISEMENT

ದ್ವೇಷ ಭಾಷಣ ತಡೆ: ರಾಷ್ಟ್ರಪತಿ ವಿವೇಚನೆಗೆ ಕಾಯ್ದಿರಿಸಿದ ರಾಜ್ಯಪಾಲ ಥಾವರಚಂದ್

ಅಭಿವ್ಯಕ್ತಿ ಸ್ವಾತಂತ್ರ್ಯದ ಮೊಟಕು: 24 ಅಂಶಗಳ ಪಟ್ಟಿಸಹಿತ ಸರ್ಕಾರಕ್ಕೆ ಮಸೂದೆ ವಾಪ‍ಸ್

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 21:19 IST
Last Updated 3 ಫೆಬ್ರುವರಿ 2026, 21:19 IST
<div class="paragraphs"><p>ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರಚಂದ್ ಗೆಹಲೋತ್‌ </p></div>

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರಚಂದ್ ಗೆಹಲೋತ್‌

   

ಬೆಂಗಳೂರು: ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆಯೂ ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ, ದ್ವೇಷ ಭಾಷಣ ತಡೆ ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರು, ಮಸೂದೆಯನ್ನು ರಾಷ್ಟ್ರಪತಿಯ ವಿವೇಚನೆಗೆ ಕಾಯ್ದಿರಿಸಿ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.

‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ -2025’ ಕ್ಕೆ ಅಂಕಿತ ಹಾಕುವಂತೆ ಕೋರಿ, ರಾಜ್ಯ ಸರ್ಕಾರ ಮಸೂದೆಯನ್ನು ಲೋಕಭವನಕ್ಕೆ ಕಳುಹಿಸಿತ್ತು. 

ADVERTISEMENT

‘25ಕ್ಕೂ ಅಂಶಗಳನ್ನು ಪಟ್ಟಿ ಮಾಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ತಮ್ಮ ಅಭಿಪ್ರಾಯಗಳ ಸಹಿತ ಮಸೂದೆಯನ್ನು ವಾಪಸ್‌ ಮಾಡಿದ್ದಾರೆ. ಕಾನೂನು ಇಲಾಖೆಯ ಪರಿಶೀಲನೆಯ ಬಳಿಕ ರಾಷ್ಟ್ರಪತಿಗೆ ಕಳುಹಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ರಾಜ್ಯಪಾಲರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

‘ಮಸೂದೆಯಲ್ಲಿ ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಮಸೂದೆ ರೂಪಿಸುವ ಮೊದಲು ಸಮಾಜದ, ಸಾರ್ವಜನಿಕರ ಜೊತೆ ಚರ್ಚೆ ನಡೆಸಿಲ್ಲ. ಯಾವುದೇ ಇಲಾಖೆಯ ಜೊತೆ ಚರ್ಚೆ ನಡೆಸಿರುವುದೂ ಕಂಡುಬಂದಿಲ್ಲ. ವಿಧಾನಸಭೆಯಲ್ಲೂ ಚರ್ಚೆ ನಡೆದಿಲ್ಲ. ಅಲ್ಲದೆ, ಈ ಮಸೂದೆಗೆ ಒಪ್ಪಿಗೆ ನೀಡದಂತೆ 40ಕ್ಕೂ ಹೆಚ್ಚು ಮನವಿಗಳು ಬಂದಿವೆ’ ಎಂದೂ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

‘ದ್ವೇಷ ಭಾಷಣ ಎಂದು ಗುರುತಿಸಲು ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ ಹಲವು ಸೆಕ್ಷನ್‌ಗಳಿವೆ. ಆದರೆ, ಈ ಮಸೂದೆಯಲ್ಲಿ ಅವುಗಳಲ್ಲಿನ ಶಿಕ್ಷೆ ಮತ್ತು ದಂಡವನ್ನು ಸರ್ಕಾರ ವಿಸ್ತರಿಸಿದೆ. ದ್ವೇಷ ಭಾಷಣ ನಿಯಂತ್ರಿಸಲು ಇಂಟರ್‌ನೆಟ್‌ ಮೇಲೆ ನಿಯಂತ್ರಣ ಹೊಂದುವ ಅಧಿಕಾರ ಪಡೆಯಲು ಸರ್ಕಾರಕ್ಕೆ ಈ ಮಸೂದೆ ಅವಕಾಶ ಕಲ್ಪಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಮಸೂದೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಈ ಅಪರಾಧಗಳು ವ್ಯಕ್ತಿಗಳಿಗೆ ಮಾತ್ರವಲ್ಲದೆ ಸಂಸ್ಥೆಗಳಿಗೂ ಅನ್ವಯಿಸುತ್ತವೆ ಮತ್ತು ಯಾವುದೇ ನೋಂದಾಯಿತ, ನೋಂದಾಯಿತವಲ್ಲದ ಸಂಸ್ಥೆಯು ಆಯೋಜಿಸುವ ರ್‍ಯಾಲಿ ಅಥವಾ ಕಾರ್ಯಕ್ರಮದಲ್ಲಿ ಅಂತಹ ಅಪರಾಧ ನಡೆದರೆ, ಅಂತಹ ಸಂಸ್ಥೆಗಳ ನಾಯಕರಿಗೂ ಶಿಕ್ಷೆಯಾಗುತ್ತದೆ. ಆದ್ದರಿಂದ, ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಆತಂಕವಿದೆ’ ಎಂದೂ ಉಲ್ಲೇಖಿಸಿದ್ದಾರೆ.

ದ್ವೇಷ ಭಾಷಣ ವ್ಯಾಖ್ಯಾನಕ್ಕೆ ಆಕ್ಷೇಪ
‘ಮಸೂದೆಯಲ್ಲಿ ದ್ವೇಷ ಭಾಷಣದ ವ್ಯಾಖ್ಯಾನದಲ್ಲಿ ಪೂರ್ವಗ್ರಹದಿಂದ ಧರ್ಮ, ಜಾತಿ, ಜನಾಂಗ, ಲಿಂಗ, ಜನ್ಮ ಸ್ಥಳ ಅಥವಾ ಅಂಗವಿಕಲತೆಗೆ ಸಂಬಂಧಿಸಿದಂತೆ ವ್ಯಕ್ತಿ ಅಥವಾ ಗುಂಪಿನ ವಿರುದ್ಧ ಹಾನಿ ಅಥವಾ ಸಾಮರಸ್ಯಕ್ಕೆ ಧಕ್ಕೆ ತರುವ ಅಭಿವ್ಯಕ್ತಿಯನ್ನು ದ್ವೇಷ ಭಾಷಣ ಎಂದು ವ್ಯಾಖ್ಯಾನಿಸಲಾಗಿದೆ. ದ್ವೇಷ ಭಾಷಣ ಮಾಡಿದ ವ್ಯಕ್ತಿಯು ಯಾವುದೇ ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ಅವನ ಹೇಳಿಕೆ ಆಧರಿಸಿ ಇಡೀ ಸಂಸ್ಥೆಯನ್ನು ಹೊಣೆ ಮಾಡುವ ಅಂಶವೂ ಮಸೂದೆಯಲ್ಲಿದೆ’ ಎಂದೂ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.