
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಪ್ರಸ್ತಾಪ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಭಾರಿ ಗದ್ದಲಕ್ಕೆ ಕಾರಣವಾಯಿತು.
ವಿರೋಧ ಪಕ್ಷಗಳಿಗೆ ಅಗತ್ಯಕ್ಕಿಂತ ಹೆಚ್ಚು ಚರ್ಚೆಗೆ ಅವಕಾಶ ನೀಡಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧವೇ ಹರಿಹಾಯ್ದ ಘಟನೆಯೂ ನಡೆಯಿತು.
ವಿಷಯ ಪ್ರಸ್ತಾಪಿಸಿದ ಅಶೋಕ ಅವರು, ಅಬಕಾರಿ ಇಲಾಖೆಯಲ್ಲಿ ವರ್ಷಕ್ಕೆ ₹6,000 ಕೋಟಿಯಷ್ಟು ಲಂಚ ವಸೂಲಿಯಾಗುತ್ತಿದೆ. ಅದು ಇಲಾಖೆ ಸಚಿವರು ಮತ್ತು ಅವರ ಮಗನ ಜೇಬಿಗೆ ಹೋಗುತ್ತಿದೆ. ಲೈಸೆನ್ಸ್ ನೀಡಲು, ಅಧಿಕಾರಿಗಳ ವರ್ಗಾವಣೆ, ಮದ್ಯದಂಗಡಿಗಳ ಹೆಸರು ಬದಲಾಯಿಸಲು ದರ ನಿಗದಿ ಮಾಡಲಾಗಿದೆ ಎಂದು ಆರೋಪಿಸಿದರು.
‘ಇಲಾಖೆಯಲ್ಲಿ ಪ್ರತಿ ವರ್ಷ ಟಾರ್ಗೆಟ್ ನೀಡಿ ಹಣ ವಸೂಲಿ ಮಾಡಲಾಗುತ್ತಿದೆ. ಎಲ್ಲ ಹಂತದಲ್ಲೂ ಕೈ ಬಿಸಿ ಮಾಡಬೇಕು. ಮದ್ಯದಂಗಡಿ ಲೈಸೆನ್ಸ್‌ಗೆ ಕೆಲವಕ್ಕೆ ₹50 ಲಕ್ಷ , ಇನ್ನು ಕೆಲವಕ್ಕೆ ₹1 ಕೋಟಿ ನಿಗದಿ ಮಾಡಲಾಗಿದೆ. ಪ್ರತಿ ತಿಂಗಳ ಮೊದಲ ವಾರ ಮಾಮೂಲಿ ನೀಡದೇ ಇದ್ದರೆ ಮಾಲೀಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ನಿಮ್ಮ(ಸಿಎಂ) ಒಂದು ಕಾಲದ ಆಪ್ತ ಗುರುಸ್ವಾಮಿಯೇ ಹೇಳಿದ್ದಾರೆ’ ಎಂದು ಅಶೋಕ ಚಾಟಿ ಬೀಸಿದರು.
ವರ್ಗಾವಣೆಯಲ್ಲೂ ಭಾರಿ ದಂಧೆ ನಡೆದಿದೆ. ಉಪ ಆಯುಕ್ತರಿಗೆ ₹2.50 ಕೋಟಿಯಿಂದ ₹3.50 ಕೋಟಿ, ಸೂಪರಿಂಟೆಂಡೆಂಟ್ ₹25 ಲಕ್ಷದಿಂದ ₹30 ಲಕ್ಷ, ಡೆಪ್ಯೂಟಿ ಸೂಪರಿಂಟೆಂಡೆಂಟ್ ₹30 ಲಕ್ಷದಿಂದ ₹40 ಲಕ್ಷ, ಅಬಕಾರಿ ವೀಕ್ಷಕರಿಗೆ ₹ 40 ಲಕ್ಷದಿಂದ ₹50 ಲಕ್ಷ , ಪೇದೆಗಳಿಗೆ ₹5 ಲಕ್ಷದಿಂದ ₹8 ಲಕ್ಷ ನೀಡಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 14,229 ಮದ್ಯ ಪೂರೈಸುವ ಮಳಿಗೆಗಳಿವೆ. ಅಚ್ಚರಿ ಎಂದರೆ ರಾಜ್ಯದಲ್ಲಿ ಇಷ್ಟು ಸಂಖ್ಯೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಪ್ರತಿ ತಿಂಗಳು ಒಂದು ಮಳಿಗೆಯಿಂದ ₹15 ಸಾವಿರದಿಂದ ₹20 ಸಾವಿರದವರೆಗೆ ಲಂಚ ವಸೂಲಿ ಮಾಡಲಾಗುತ್ತಿದೆ. ಈ ರೀತಿ ಕನಿಷ್ಠ ₹21 ಕೋಟಿ ಸಂಗ್ರಹಿಸಲಾಗುತ್ತಿದೆ. ವರ್ಷಕ್ಕೆ ₹252 ಕೋಟಿ ಲಂಚ ಸಂಗ್ರಹ ಆಗುತ್ತಿದೆ ಎಂದು ದೂರಿದರು.
ಮನೆ ಮನೆಗೆ ಮದ್ಯ ಪೂರೈಕೆಯೇ ನಿಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮ. ಈ ಹಗರಣ ಸರ್ಕಾರಕ್ಕೆ ದೊಡ್ಡ ಕಪ್ಪು ಚುಕ್ಕೆಯಾಗಿದೆ.-ಆರಗ ಜ್ಞಾನೇಂದ್ರ, ಬಿಜೆಪಿ
ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಇಷ್ಟೆಲ್ಲ ದಾಖಲೆಗಳನ್ನು ಕೊಡುತ್ತಿದ್ದರೂ ಕೇಳಿಸಿಕೊಂಡು ಕುಳಿತಿದ್ದಾರೆ.-ವಿ.ಸುನಿಲ್‌ಕುಮಾರ್, ಬಿಜೆಪಿ
ಯಾವುದೋ ಬಾರಲ್ಲಿ ನಡೆದ ಕಥೆಯನ್ನು ಇಲ್ಲಿ ಹೇಳುತ್ತಿದ್ದಾರೆ. ಇಂತಹ ಕಥೆಗಳು ಬೇಕಾದಷ್ಟಿವೆ. ಅವುಗಳನ್ನೆಲ್ಲ ಇಲ್ಲಿ ಚರ್ಚೆ ಮಾಡಲು ಅವಕಾಶ ನೀಡಬಾರದು.-ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್
ನಮ್ಮ ಮುಖ್ಯಮಂತ್ರಿ ಕಳಂಕರಹಿತರು ಭ್ರಷ್ಟಾಚಾರದ ಒಂದೂ ಕಪ್ಪು ಚುಕ್ಕೆ ಅವರ ಮೇಲಿಲ್ಲ. ಅವರ ವಿರುದ್ಧ ಬಿಜೆಪಿಯವರು ವೃಥಾ ಆರೋಪ ಹೊರಿಸಿದ್ದಾರೆ.-ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್
ಕೆಲಸಕ್ಕೆ ಬಾರದ್ದನ್ನು ಇಲ್ಲಿಗೆ ತಂದು ಸಾಕ್ಷ್ಯ ಎಂದರೆ ಒಪ್ಪಲು ಸಾಧ್ಯವಿಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಕೊಡಿ.-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
‘ಒಕ್ಕಲಿಗರಾ ಕುರುಬರಾ?.. ದೊಡ್ಡವರ ಬಳಿ ಹೋಗಿ’
‘ಲೈಸೆನ್ಸ್ ನೀಡುವಾಗ ಜಾತಿ ಮತ್ತು ಪಕ್ಷವನ್ನು ಕೇಳುತ್ತಾರೆ. ಜೆಡಿಎಸ್ ಎಂದರೆ ಒಕ್ಕಲಿಗ ಎಂದರೆ ಲೈಸೆನ್ಸ್ ಕೊಡಲು ಅಧಿಕಾರಿಗಳು ಒಪ್ಪುವುದಿಲ್ಲ’ ಎಂದು ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ ದೂರಿದರು.
‘ಕೆ.ಆರ್.ಪೇಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಎಲ್ 7 ಗೆ ಒಬ್ಬರು ಅರ್ಜಿ ಹಾಕಿದ್ದರು. ಲೈಸೆನ್ಸ್ ಪಡೆಯಲು ಎಲ್ಲ ರೀತಿಯಿಂದ ಅರ್ಹರಿದ್ದರೂ ಅವರಿಗೆ ಲೈಸೆನ್ಸ್ ಸಿಗಲಿಲ್ಲ ಎಂದು ಹೇಳಿದರು. ಅಬಕಾರಿ ಇಲಾಖೆ ಅಧಿಕಾರಿ ನಾಗಶಯನ ಅವರು ಅರ್ಜಿದಾರರಿಗೆ ‘ನೀವು ಜೆಡಿಎಸ್ ಕಾರ್ಯಕರ್ತರೇ ಒಕ್ಕಲಿಗರೇ ಎಂದು ಪ್ರಶ್ನಿಸಿದ್ದರು. ಜೆಡಿಎಸ್ ಕಾರ್ಯಕರ್ತ ಅಲ್ಲ ಆ ಪಕ್ಷಕ್ಕೆ ಮತ ಹಾಕಿದ್ದೇನೆ ಒಕ್ಕಲಿಗ ಎಂದು ಅವರು ಉತ್ತರಿಸುತ್ತಾರೆ. ನಿಮ್ಮಲ್ಲಿ ಕುರುಬ ಮುಖಂಡರು ಇದ್ದರೆ ಅವರ ಜತೆ ದೊಡ್ಡವರು( ಸಿದ್ದರಾಮಯ್ಯ) ಅಥವಾ ಚಿಕ್ಕವರ (ಯತೀಂದ್ರ) ಬಳಿ ಹೋಗಿ ಹೇಳಿಸಿ ಕೆಲಸ ಆಗುತ್ತದೆ ಎಂದು ಅಧಿಕಾರಿ ಹೇಳುತ್ತಾನೆ. ಇದರ ಆಡಿಯೊ ಇದೆ. ವಿಡಿಯೊವನ್ನು ಕಿತ್ತುಕೊಂಡಿದ್ದಾರೆ. ಸಾಲ ಮಾಡಿಕೊಂಡಿದ್ದ ಅರ್ಜಿದಾರ ಲೈಸೆನ್ಸ್ ಸಿಗದೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.