
ಬೆಂಗಳೂರು: ‘ಮದ್ಯ ಮಾರಾಟ ಸನ್ನದು ನೀಡುವಲ್ಲಿ ಲಂಚ ಪಡೆಯಲು ಅಧಿಕಾರಿಗಳು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹಾಗೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಇಲಾಖಾ ಪ್ರಗತಿಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಈ ಖಾತೆಯೇ ಅಂಥದ್ದು. ಈ ಹಿಂದೆ ಸಚಿವರಾಗಿದ್ದವರ ವಿರುದ್ಧವೂ ಆರೋಪಗಳು ಬಂದಿವೆ. ಈಗಲೂ ಬರುತ್ತಿವೆ. ಆದರೆ ಅವೆಲ್ಲಾ ಸುಳ್ಳು’ ಎಂದರು.
‘ಸನ್ನದು ನೀಡುವಲ್ಲಿ ಮತ್ತು ನವೀಕರಣದಲ್ಲಿ ಹಲವು ಸುಧಾರಣಾ ಕ್ರಮಗಳನ್ನು ತಂದಿದ್ದೇನೆ. ಇದರಿಂದ ಹಲವರಿಗೆ ತೊಂದರೆ ಆದಂತಿದೆ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಇಲಾಖೆಯ ವಿರುದ್ಧ ಆರೋಪ ಮಾಡಿದಂತಹ ಸಂಘಟನೆಯ ಮಾನ್ಯತೆಯ ಅವಧಿ ಮುಗಿದು, ಎಷ್ಟೋ ವರ್ಷಗಳಾಗಿವೆ. ಆ ಸಂಘಕ್ಕೆ ಮಾನ್ಯತೆಯೇ ಇಲ್ಲ’ ಎಂದರು.
‘ವಿಶೇಷ ಅಧಿವೇಶನದಲ್ಲಿ ನರೇಗಾ ಯೋಜನೆ ಬಗ್ಗೆ ಚರ್ಚಿಸುವುದು ಬಜೆಪಿ ಸದಸ್ಯರಿಗೆ ಬೇಡವಾಗಿತ್ತು. ಹೀಗಾಗಿ ನನ್ನ ಮೇಲಿನ ಆರೋಪಕ್ಕೆ ಅವರು ಜೋತುಬಿದ್ದರು. ಆದರೂ, ನಮ್ಮ ಸರ್ಕಾರ ನರೇಗಾ ಕುರಿತು ಪರಿಣಾಮಕಾರಿ ಚರ್ಚೆ ನಡೆಸಿತು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘2025–26ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ ₹40,000 ಕೋಟಿ ಆದಾಯ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿತ್ತು. ಈಗಾಗಲೇ ₹34,000 ಕೋಟಿ ಸಂಗ್ರಹವಾಗಿದೆ. ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ, ಬಜೆಟ್‌ನ ಅಂದಾಜಿಗಿಂತಲೂ ಹೆಚ್ಚು ಆದಾಯ ಗಳಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.