ADVERTISEMENT

ಎರಡು ವರ್ಷಗಳಲ್ಲಿ 2.32 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 23:13 IST
Last Updated 13 ಜೂನ್ 2025, 23:13 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ₹6.57 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ 115 ಒಪ್ಪಂದಗಳನ್ನು  ಮಾಡಿಕೊಳ್ಳಲಾಗಿದ್ದು, 2.32 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಎರಡು ವರ್ಷಗಳ ಸಾಧನೆ ಒಳಗೊಂಡ ‘ಪ್ರಗತಿ ಪಥದ ಮುಂದಣ ಹೆಜ್ಜೆ’ ಕೈಪಿಡಿ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಿದ್ಧಪಡಿಸಿದ ಹೊಸ ಕೈಗಾರಿಕಾ ನೀತಿ 2025-30 ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ₹7.50 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಿ, 20 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ ಇದೆ ಎಂದರು.  

ಪ್ರಾದೇಶಿಕ ಸಮತೋಲನ ಆಶಯದಡಿ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಎರಡು ವರ್ಷಗಳಲ್ಲಿ ಕೈಗಾರಿಕ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ, ತಾಲ್ಲೂಕುಗಳಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಶೇ 75ರಷ್ಟು ಬೆಂಗಳೂರಿನ ಆಚೆಗೆ ಇರಲಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಶೇ 45 ಉದ್ಯೋಗ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರು ದಾಪುಗಾಲು ಇಡುತ್ತಿದೆ. ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಏಷ್ಯಾದ ರಾಜಧಾನಿʼಯಾಗಿ ರೂಪುಗೊಳ್ಳಲಿದೆ. ಟಾಟಾ, ಇಂಡಿಗೊ, ಲಾಕ್ಕೀಡ್‌ ಸಂಸ್ಥೆಗಳು ಕ್ರಮವಾಗಿ ₹1,460 ಕೋಟಿ, ₹1,100 ಕೋಟಿ ಹಾಗೂ ₹500 ಕೋಟಿ ಹೂಡಿಕೆ ಮಾಡಲಿವೆ’ ಎಂದು ಹೇಳಿದರು.

ರಾಜ್ಯದಲ್ಲಿ ವ್ಯವಸ್ಥಿತ ಮತ್ತು ವ್ಯಾಪಕ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು 44,165 ಎಕರೆ ವಿಸ್ತೀರ್ಣದಲ್ಲಿ ಪೀಣ್ಯ ಸೇರಿದಂತೆ ಒಟ್ಟು 18 ಕೈಗಾರಿಕಾ ವಸಹಾತುಗಳನ್ನು ವಿಶೇಷ ಬಂಡವಾಳ ಹೂಡಿಕೆ ಪ್ರದೇಶಗಳಾಗಿ ಘೋಷಣೆ ಮಾಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಕೈಗಾರಿಕಾ ವಲಯದಲ್ಲಿ ಕೆಐಎಡಿಬಿ ಸಂಗ್ರಹಿಸಿದ ಆಸ್ತಿ ತೆರಿಗೆಯಲ್ಲಿ ಶೇ70ರಷ್ಟು ಮೊತ್ತ ಮೂಲಸೌಕರ್ಯಕ್ಕೆ ಮೀಸಲಿಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್‌ ಕೃಷ್ಣ, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್‌, ಕೆಐಎಡಿಬಿ ಸಿಇಒ ಮಹೇಶ್‌, ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಉಪಸ್ಥಿತರಿದ್ದರು.  

ಏಕಗವಾಕ್ಷಿಗೆ ‘ಮೈಕ್ರೊಸಾಫ್ಟ್‌’

ಸಹಯೋಗ ಮೈಕ್ರೊಸಾಫ್ಟ್‌ ಕಂಪನಿಯ ಸಹಯೋಗದಲ್ಲಿ ಹೂಡಿಕೆದಾರರ ಸ್ನೇಹಿ ಏಕಗವಾಕ್ಷಿ ಅಂತರ್ಜಾಲ ತಾಣ  ಅಭಿವೃದ್ಧಿಸಲಾಗಿದೆ. 30 ಇಲಾಖೆಗಳ 100ಕ್ಕೂ ಹೆಚ್ಚು ಸೇವೆಗಳನ್ನು ಈ ತಾಣದಲ್ಲಿ ಸುಲಭವಾಗಿ ಪಡೆಯಬಹುದು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು. ಹೂಡಿಕೆಯ ಒಪ್ಪಂದಗಳನ್ನು ಕಾಲಮಿತಿಯ ಒಳಗೆ ಅನುಷ್ಠಾನಗೊಳಿಸಲು ಎಲ್ಲ ಇಲಾಖೆಗಳ ಸಹಯೋಗ ಕೋರಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆ ನಡೆಸಲಾಗಿದೆ ಎಂದರು.

‘ಮೂರು ತಿಂಗಳಿನಲ್ಲಿ ಕ್ವಿನ್ ಸಿಟಿ ಆರಂಭ’

ದೊಡ್ಡಬಳ್ಳಾಪುರ-ದಾಬಸ್‌ಪೇಟೆ ಮಧ್ಯದಲ್ಲಿ ₹40000 ಕೋಟಿ ಹೂಡಿಕೆಯ ಜ್ಞಾನ ಯೋಗಕ್ಷೇಮ ಮತ್ತು ನಾವೀನ್ಯತೆಯ ‘ಕ್ವಿನ್‌ ಸಿಟಿ’ಯ ಸಿದ್ಧತೆಗಳನ್ನು ಮೂರು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಎಂ.ಬಿ. ಪಾಟೀಲ ಹೇಳಿದರು. ಕೃತಕ ಬುದ್ಧಿಮತ್ತೆ ದತ್ತಾಂಶ ವಿಶ್ಲೇಷಣೆ ಹಣಕಾಸು- ತಂತ್ರಜ್ಞಾನ ಉದ್ಯಮಗಳಿಗೆ ನೆಲೆ ಕಲ್ಪಿಸಲು 1000 ಎಕರೆ ವಿಸ್ತೀರ್ಣದಲ್ಲಿ ‘ಸ್ವಿಫ್ಟ್‌ ಸಿಟಿ’ ನಿರ್ಮಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.