ADVERTISEMENT

ಸುಲಿಗೆ ಪ್ರಕರಣ | ಶ್ರೀನಾಥ್ ಜೋಶಿ ಮೊಬೈಲ್‌ನಲ್ಲಿ ದತ್ತಾಂಶ ನಾಶ: HCಗೆ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 15:30 IST
Last Updated 30 ಆಗಸ್ಟ್ 2025, 15:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ನಡೆಯುತ್ತಿದ್ದ ಸುಲಿಗೆ ದಂಧೆಯಲ್ಲಿ ಭಾಗಿಯಾದ ಪ್ರಕರಣದಲ್ಲಿ ಆರೋಪಿಯಾಗಿರುವ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಎಂ.ಜೋಶಿ ಅವರಿಂದ ಪಡೆಯಲಾಗಿರುವ ಎರಡು ಮೊಬೈಲ್‌ ಫೋನ್‌ಗಳಲ್ಲಿ ಎಲ್ಲ ದತ್ತಾಂಶಗಳನ್ನು ಅಳಿಸಿ ಹಾಕಲಾಗಿದೆ’ ಎಂದು ಲೋಕಾಯುಕ್ತ, ಹೈಕೋರ್ಟ್‌ಗೆ ಅರುಹಿದೆ.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಶ್ರೀನಾಥ್‌ ಎಂ.ಜೋಶಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಲೋಕಾಯುಕ್ತ ಪರ ವೆಂಕಟೇಶ್ ಅರಬಟ್ಟಿ ಜಾಮೀನು ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ‘ಈ ಪ್ರಕರಣದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಸೇವೆಯಿಂದ ವಜಾಗೊಂಡಿರುವ ಮೊದಲ ಆರೋಪಿ ನಿಂಗಪ್ಪ ಸಾವಂತ್‌ ಜೊತೆ ಶ್ರೀನಾಥ್‌ ಜೋಶಿ ನಿರಂತರ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ. ಇದಕ್ಕೆ ಪೂರಕವಾಗಿ ಆಡಿಯೊ ಮತ್ತು ಫೋಟೊ ಸಾಕ್ಷ್ಯಗಳು ಲಭ್ಯವಾಗಿವೆ’ ಎಂದರು.

ADVERTISEMENT

‘ಇಬ್ಬರೂ ಆರೋಪಿಗಳ ವಿರುದ್ಧದ ಆಪಾದನೆಗಳು ತುಂಬಾ ಗಂಭೀರವಾಗಿವೆ. ತನಿಖೆ ಪ್ರಗತಿಯಲ್ಲಿದೆ. ಈ ಕಾರಣಕ್ಕಾಗಿಯೇ ವಿಚಾರಣಾ ನ್ಯಾಯಾಲಯ ಜೋಶಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ’ ಎಂದರು.

ಇದಕ್ಕೆ ಪ್ರತಿಯಾಗಿ ಜೋಶಿ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ.ಚೌಟ, ‘ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನಿಂಗಪ್ಪ ಸಾವಂತ್‌ಗೆ ಜೋಶಿ ನಿರ್ದೇಶನ ನೀಡಿದ್ದಾರೆ ಎಂಬುದಕ್ಕೆ ಪೂರಕವಾದ ಯಾವುದೇ ದಾಖಲೆಯನ್ನು ಲೋಕಾಯುಕ್ತ ಪೊಲೀಸರು ನೀಡಿಲ್ಲ. ಈ ಪ್ರಕರಣದಲ್ಲಿ ಈಗಾಗಲೇ ನಿಂಗಪ್ಪಗೆ ಜಾಮೀನು ದೊರೆತಿದೆ. ಲೋಕಾಯುಕ್ತ ಪೊಲೀಸರು ಜೋಶಿ ಅವರ ಮನೆಯಲ್ಲಿ ಶೋಧ ನಡೆಸಿದಾಗ ಯಾವುದೇ ಮಹತ್ವದ ದಾಖಲೆಗಳು ದೊರೆತಿಲ್ಲ’ ಎಂದರು.

ದಿನದ ಕಲಾಪದ ವೇಳೆ ಅಂತ್ಯಗೊಂಡ ಕಾರಣ ವಾದ–ಪ್ರತಿವಾದವನ್ನು ಮೊಟಕಗೊಳಿಸಿದ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧ ಆತುರದ ಕ್ರಮ ಬೇಡ’ ಎಂಬ ಈ ಹಿಂದಿನ ಆದೇಶವನ್ನು ವಿಸ್ತರಿಸಿತು. ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.