ADVERTISEMENT

ಪೊಲೀಸರ ಕೆಲಸ ವೈಖರಿ ಪರಿಶೀಲನೆಗೆ ರಾಜಭವನಕ್ಕೆ ಹುಸಿ ಬಾಂಬ್‌ ಕರೆ: ಆರೋಪಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 15:22 IST
Last Updated 13 ಡಿಸೆಂಬರ್ 2023, 15:22 IST
ಭಾಸ್ಕರ್‌
ಭಾಸ್ಕರ್‌   

ಬೆಂಗಳೂರು: ರಾಜಭವನಕ್ಕೆ ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಆರೋಪಿ ಭಾಸ್ಕರ್‌ನನ್ನು ಬಂಧಿಸಿರುವ ವಿಧಾನಸೌಧ ಠಾಣೆ ಪೊಲೀಸರು, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

‘ಪೊಲೀಸರು ಎಷ್ಟರಮಟ್ಟಿಗೆ ಅಲರ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಕರೆ ಮಾಡಿದ್ದೆ’ ಎಂಬುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದರು.

‘ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ವಡ್ಡಹಳ್ಳಿಯ ಭಾಸ್ಕರ್, ಬಿ.ಕಾಂ ಪದವೀಧರ. ವ್ಯವಸಾಯ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಇ–ಮೇಲ್ ಬಂದಿದ್ದ ಮಾಹಿತಿ ತಿಳಿದುಕೊಂಡಿದ್ದ. ಪೊಲೀಸರು ತನಿಖೆ ನಡೆಸುತ್ತಿರುವ ಮಾಹಿತಿ ಪಡೆದುಕೊಂಡಿದ್ದ ಆರೋಪಿ, ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಈ ವೇಳೆ ರಾಜಭವನದ ಸುತ್ತಮುತ್ತ ಓಡಾಟ ನಡೆಸಿದ್ದ. ಪೊಲೀಸರನ್ನು ಕಾರ್ಯ ವೈಖರಿ ಪರಿಶೀಲಿಸಲು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹಾಯವಾಣಿಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಡಿ.11ರಂದು ರಾತ್ರಿ 11.35ಕ್ಕೆ ಎನ್ಐಎಗೆ ಕರೆ ಮಾಡಿ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಎನ್ಐಎ ಅಧಿಕಾರಿಗಳು ಸಹಾಯವಾಣಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ವಿಧಾನಸೌಧ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ಬಸ್‌ನಲ್ಲಿ ತೆರಳುವಾಗ ರಾಜಭವನ ಕಂಡು ಕರೆ ಮಾಡಿದ್ದೆ ಎಂಬುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.