ADVERTISEMENT

ನಕಲಿ ಮೊಕದ್ದಮೆ, ಡಿಕ್ರಿ ಪ್ರಕರಣ: ‘ಐಪಿಎಸ್’ ವಿಚಾರಣೆಗೆ ಹೆದರಿತಾ ಸಿಐಡಿ ?

ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ

ಸಂತೋಷ ಜಿಗಳಿಕೊಪ್ಪ
Published 10 ಜುಲೈ 2022, 19:08 IST
Last Updated 10 ಜುಲೈ 2022, 19:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಕಲಿ ಕಕ್ಷಿದಾರ– ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆದು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸುತ್ತಿದ್ದ ಭೂಗಳ್ಳರ ಜಾಲ ಭೇದಿಸಿದ್ದ ಸಿಐಡಿ ಅಧಿಕಾರಿಗಳು, ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಐಪಿಎಸ್ ಅಧಿಕಾರಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಲು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿದೆ.

ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕಬಳಿಸಲು ನಕಲಿ ಮೊಕದ್ದಮೆ ಹೂಡುತ್ತಿದ್ದ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ವಕೀಲರು ಸೇರಿದಂತೆ ಹಲವರನ್ನು ಈಗಾಗಲೇ ಬಂಧಿಸಿದ್ದಾರೆ. ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪೊಲೀಸ್ ಇಲಾಖೆಯ ಉನ್ನತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿಯೊಬ್ಬರು ನಕಲಿ ಮೊಕದ್ದಮೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ವ್ಯಕ್ತವಾಗಿದೆ. ಆದರೆ, ಅವರನ್ನು ವಿಚಾರಣೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಹೆದರುತ್ತಿರುವುದಾಗಿ ಕೆಲ ಆಸ್ತಿಗಳ ಮಾಲೀಕರು ದೂರುತ್ತಿದ್ದಾರೆ.

ADVERTISEMENT

‘ಕಷ್ಟಪಟ್ಟು ದುಡಿದು ಸಂಪಾದಿಸಿದ ಆಸ್ತಿಯನ್ನು ನಕಲಿ ಕಕ್ಷಿದಾರ– ಪ್ರತಿವಾದಿಗಳ ಮೂಲಕ ಸುಲಭವಾಗಿ ಕಬಳಿಸುವ ಜಾಲ ಬೆಂಗಳೂರು ಹಾಗೂ ಇತರೆಡೆ ಸಕ್ರಿಯವಾಗಿದೆ. ಜಾಲ ಭೇದಿಸಿರುವ ಸಿಐಡಿ ಅಧಿಕಾರಿಗಳ ಕೆಲಸ ಮೆಚ್ಚುವಂಥದ್ದು. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಐಪಿಎಸ್ ಅಧಿಕಾರಿ ವಿಚಾರಣೆ ಕೈಬಿಟ್ಟಿರುವುದು ಸರಿಯಲ್ಲ’ ಎಂದು ಹೆಸರು ಹೇಳಲು ಬಯಸದ ಆಸ್ತಿ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

‘ನಕಲಿ ಮೊಕದ್ದಮೆ ಹೂಡಿ ನ್ಯಾಯಾಲಯದಿಂದ ಡಿಕ್ರಿ ತಂದಿದ್ದ ಆರೋಪಿಗಳು, ನಮ್ಮ ಆಸ್ತಿಗೆ ಬೇಲಿ ಹಾಕಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆಯೊಡ್ಡಿದ್ದರು. ಆರೋಪಿಗಳ ಪರ ನಿಂತ ಐಪಿಎಸ್ ಅಧಿಕಾರಿ, ಅಧಿಕಾರ ದುರುಪಯೋಗಪಡಿಸಿಕೊಂಡು ದರ್ಪ ಪ್ರದರ್ಶಿಸಿದ್ದರು. ಸಿಐಡಿ ಪ್ರಕರಣ ಭೇದಿಸಿದ ನಂತರವೇ, ಐಪಿಎಸ್ ಅಧಿಕಾರಿಯೂ ಆರೋಪಿಗಳ ಜೊತೆ ಶಾಮೀಲಾಗಿರುವುದು ಗೊತ್ತಾಗಿದೆ. ಇದರ ಹಿಂದೆ ಭೂಮಾಫಿಯಾ ಕೈವಾಡ ಇದೆ' ಎಂದೂ ತಿಳಿಸಿದರು.

‘ಹಿರಿಯ ಅಧಿಕಾರಿ ಎಂಬ ಕಾರಣಕ್ಕೆ ಹಾಗೂ ತಮ್ಮ ಹುದ್ದೆಗೆ ಕುತ್ತು ಬರುವ ಭಯದಲ್ಲಿ ಸಿಐಡಿ ಅಧಿಕಾರಿಗಳು, ಐಪಿಎಸ್ ಅಧಿಕಾರಿಯನ್ನು ವಿಚಾರಣೆ ನಡೆಸುತ್ತಿಲ್ಲ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಹೈಕೋರ್ಟ್ ಚಾಟಿ ಬೀಸಿದ್ದರಿಂದ, ಎಡಿಜಿಪಿ ಅಮ್ರಿತ್ ಪೌಲ್‌ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರೇ, ನಕಲಿ ಮೊಕದ್ದಮೆ ಪ್ರಕರಣ ಪತ್ತೆ ಹಚ್ಚಿದ್ದರು. ಇದೀಗ, ಪ್ರಕರಣದಲ್ಲಿ ಶಾಮೀಲಾಗಿರುವ ಐಪಿಎಸ್ ಅಧಿಕಾರಿಗಳು ಹಾಗೂ ಪ್ರಭಾವಿಗಳ ವಿರುದ್ಧವೂ ತನಿಖೆ ನಡೆಸಲು ಹೈಕೋರ್ಟ್‌ ಸೂಚನೆ ನೀಡಬೇಕೆಂಬುದು ನಮ್ಮೆಲ್ಲರ ಮನವಿ’ ಎಂದೂ ಹೇಳಿದರು.

ಆಸ್ತಿ ಮಾಲೀಕರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಐಡಿ ಅಧಿಕಾರಿಯೊಬ್ಬರು, ‘ಪ್ರಕರಣವು ನ್ಯಾಯಾಲಯದಲ್ಲಿದೆ. ಸದ್ಯಕ್ಕೆಏನು ಹೇಳಲಾಗದು’ ಎಂದು ಹೇಳಿದರು.

ವಕೀಲರ ವಿರುದ್ಧ ಸಾಕ್ಷ್ಯ ಹುಡುಕಾಟ: ಬಂಧಿತ ವಕೀಲರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ಇರುವ ಸಾಕ್ಷ್ಯ ಹಾಗೂ ಅವಕಾಶಗಳಿಗಾಗಿ ಸಿಐಡಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

‘ಈ ಅಕ್ರಮಕ್ಕೆ ಸಹಕರಿಸಿದ್ದನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲರನ್ನು ಈಗಾಗಲೇ ಬಂಧಿಸಲಾಗಿದೆ. ಇವರು ಖುಲಾಸೆ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಬಲವಾದ ಸಾಕ್ಷ್ಯವನ್ನು ಇಟ್ಟುಕೊಂಡು ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

***

‘130 ಪ್ರಕರಣ: ಹೈಕೋರ್ಟ್‌ಗೆ ವರದಿ’

‘ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ’ ಬಗ್ಗೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಲಘು ಪ್ರಕರಣಗಳ ನ್ಯಾಯಾಲಯದ (ಎಸ್‌ಸಿಸಿಎಚ್) ರಿಜಿಸ್ಟ್ರಾರ್ ಆರ್. ಧನಲಕ್ಷ್ಮಿ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು. 2020ರ ಡಿಸೆಂಬರ್ 7ರಂದು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

‘ಹೈಕೋರ್ಟ್‌ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ. ನಕಲಿ ಮೊಕದ್ದಮೆಯ 130 ಪ್ರಕರಣ ಪತ್ತೆ ಮಾಡಲಾಗಿದ್ದು, ಒಟ್ಟು ಆಸ್ತಿ ಮೌಲ್ಯ ಸುಮಾರು ₹ 1,000 ಕೋಟಿ ಇದೆ. ಹೆಚ್ಚುವರಿಯಾಗಿ ಇಂಥ 500 ಕ್ಕೂ ಹೆಚ್ಚು ಪ್ರಕರಣಗಳು ಇರುವ ಬಗ್ಗೆಯೂ ಸಂಶಯವಿದೆ. ಈ ಬಗ್ಗೆ ಹೈಕೋರ್ಟ್‌ಗೂ ವರದಿ ಸಲ್ಲಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಜಾಲದ ಕಾರ್ಯವೈಖರಿ

‘ಖಾಲಿ ಜಾಗ ಗುರುತಿಸುತ್ತಿದ್ದ ಆರೋಪಿಗಳು, ಆಸ್ತಿಯ ನೈಜ ಮಾಲೀಕರ ಹೆಸರು ಮುಚ್ಚಿಟ್ಟು ನಕಲಿ ಮಾಲೀಕನನ್ನು ಸೃಷ್ಟಿಸುತ್ತಿದ್ದರು. ಅದೇ ಮಾಲೀಕನನ್ನು ಕಕ್ಷಿದಾರರನ್ನಾಗಿ ಮಾಡಿ, ನಕಲಿ ಪ್ರತಿವಾದಿ ಸಮೇತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಿದ್ದರು. ಕಕ್ಷಿದಾರ – ಪ್ರತಿವಾದಿಗಳ ಪರ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ವಕೀಲರು, ರಾಜಿ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿ ಆಸ್ತಿ ರಾಜಿ ಡಿಕ್ರಿ ಆದೇಶ ಪಡೆದುಕೊಳ್ಳುತ್ತಿದ್ದರು. ಅದೇ ಡಿಕ್ರಿ ಬಳಸಿ, ಜಾಗವನ್ನು ತಮ್ಮದಾಗಿಸಿಕೊಂಡು, ನೂರಾರು ಕೋಟಿ ರೂಪಾಯಿಗೆ ಮಾರುತ್ತಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.