ADVERTISEMENT

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ 170 ಪ್ರಕರಣ ಸಾಬೀತು: ಕ್ರಮಕ್ಕೆ ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 9:03 IST
Last Updated 25 ಆಗಸ್ಟ್ 2025, 9:03 IST
   

ಬೆಂಗಳೂರು: 'ಸುಳ್ಳು ಜಾತಿ ಪ್ರಮಾಣಪತ್ರ ಸಾಬೀತಾಗಿರುವ 170 ಪ್ರಕರಣಗಳಲ್ಲಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದಿರುವುದು ಸಾಬೀತಾದರೆ ಅದನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 'ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳ ಕುರಿತು ನ್ಯಾಯಾಲಯಗಳು ತೀರ್ಪು ನೀಡಿದರೂ ಜಾರಿಗೆ ಯಾಕೆ ಬಾಕಿ ಇದೆ. ಈ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಿದ್ದು, ಸಮಗ್ರ ವರದಿಯನ್ನು ಸಲ್ಲಿಸಬೇಕು' ಎಂದು ಸೂಚಿಸಿದರು.

'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು' ಎಂದೂ ಸೂಚನೆ ನೀಡಿದರು

ADVERTISEMENT

'ಮೂರು ವರ್ಷಗಳಲ್ಲಿ ಪರಿಶಿಷ್ಟರ ಮೇಲೆ ಒಟ್ಟು 6,635 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು 4,912 ಪ್ರಕರಣಗಳಲ್ಲಿ ಮಾತ್ರ. ಅದರಲ್ಲೂ 60 ದಿನಗಳ ಒಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು 4,149 ಪ್ರಕರಣಗಳಲ್ಲಿ ಮಾತ್ರ. ನೋಂದಣಿಯಾದ ಒಟ್ಟು ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಶೇ 63 ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ಪಟ್ಟಿ ಸಲ್ಲಿಕೆ ಆಗಿದೆ. ಶಿಕ್ಷೆಯಾದ ಪ್ರಕರಣಗಳು ಕೇವಲ 36. ತನಿಖಾ ಹಂತದಲ್ಲಿ ಸುಮಾರು 679 ಪ್ರಕರಣಗಳಿವೆ. ಈ ಹಿಂದೆ ನಡೆದಿರುವ ಪ್ರಕರಣಗಳ ಸ್ಥಿತಿ ಗತಿ ಏನು? ಆಯಾ ವರ್ಷಗಳಲ್ಲಿ ನಡೆದಿರುವ ಪ್ರಕರಣಗಳ ನಿಖರ ದಾಖಲೆ ನೀಡಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು

ರಾಜ್ಯದಲ್ಲಿ 33 ಡಿಸಿಆರ್‌ಇ ಪೊಲೀಸ್‌ ಠಾಣೆಗಳನ್ನು ಈಗಾಗಲೇ ತೆರೆಯಲಾಗಿದೆ ಇಲ್ಲಿ ಸಿಬ್ಬಂದಿ ಕೊರತೆಯಿದ್ದರೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಸೂಕ್ತ ಪ್ರಸ್ತಾವ ಸಲ್ಲಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದೂರಿನಲ್ಲಿ ಸತ್ಯಾಂಶವಿದ್ದರೆ ಮಾತ್ರ ಎಫ್‌ಐಆರ್‌ ದಾಖಲಿಸಬೇಕು ಎಂದು ಅವರು ಸ್ಪಷ್ಟ ಸೂಚನೆ ನೀಡಿದರು.

ಮುಖ್ಯಮಂತ್ರಿ ಹೇಳಿದ್ದೇನು..

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ

* ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣಗಳಲ್ಲಿ ಕಾನೂನು ಕ್ರಮ

* ದೇವದಾಸಿಯರ ಸಮೀಕ್ಷೆ ಪೂರ್ಣಗೊಂಡ ಬಳಿಕ, ಪುನರ್ವಸತಿ ಮತ್ತು ಈ ಪಿಡುಗು ತೊಲಗಿಸಲು ಯೋಜನೆ ಜಾರಿ * ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ

* ದಲಿತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಅಡ್ಡಗಾಲು ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ

ಮುಖ್ಯಮಂತ್ರಿ ಎದುರೇ ಬೇಸರ:

ಕಲುಬುರಗಿಯಲ್ಲಿ ತಮ್ಮನ್ನು ಕೂಡಿ ಹಾಕಿದ ಪ್ರಕರಣವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಭೆಯಲ್ಲಿ ಪ್ರಸ್ತಾಪಿಸಿ ಭಾವಚಿತ್ರ ಮತ್ತು ಕಾರಿಗೆ ಮಸಿ ಬಳಿದ ಚಿತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ದೂರು ದಾಖಲಿಸುವಂತೆ ಮುಖ್ಯಮಂತ್ರಿಯವರು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿದರು. ‘ಕೋಲಾರ ಶಾಸಕರೊಬ್ಬರ ಜಾತಿ ಪ್ರಮಾಣಪತ್ರದ ವಿಚಾರದಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಜಾರಿ ಮಾಡುವುದರಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಸಚಿವರೊಬ್ಬರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.